ದೇಶ

25 ಶಾಲೆಗಳಲ್ಲಿ ಕೆಲಸ ಮಾಡಿ ರೂ. 1 ಕೋಟಿ ಸಂಬಳ ಪಡೆದ ಶಿಕ್ಷಕಿ!: ತನಿಖೆಗೆ ಆದೇಶ

Manjula VN

ಲಖನೌ: ಶಿಕ್ಷಕಿಯೊಬ್ಬಳು ಏಕಕಾಲಕ್ಕೆ 25 ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿ, ಕೇವಲ 13 ತಿಂಗಳಲ್ಲಿ ಬರೋಬ್ಬರಿ ರೂ. 1 ಕೋಟಿ ವೇತನ ಪಡೆದಿರುವ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. 

ಉತ್ತರಪ್ರದೇಶದ ಕಸ್ತೂರಬಾ ಗಾಂಧಿ ಭಾಲಿಕಾ ವಿದ್ಯಾಲಯದಲ್ಲಿ ನಡೆದ ಈ ವಂಚನೆ ಬಗ್ಗೆ ಇದೀಗ ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ. 

ಮೈನ್ಪುರಿ ಮೂಲದ ಅನಾಮಿಕಾ ಶುಕ್ಲಾ ಎಂಬ ಶಿಕ್ಷಕಿ ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ಕೆಜಿಬಿವಿ ಬಾಲಕಿಯರ ವಸತಿ ಶಾಲೆಯ ರಾಯ್ ಬರೇಲಿ ಶಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾಳೆ. ಪ್ರತಿ ತಿಂಗಳು ಈಕೆಗೆ ರೂ.30,000 ಸಂಬಳ ನೀಡಲಾಗಿದೆ. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಶಿಕ್ಷಕರ ದತ್ತಾಂಶಗಲನ್ನು ಗಣಕೀಕರಣಗೊಳಿಸುವಾಗ ಈಕೆಯ ಹೆಸರು ಅಂಬೇಡ್ಕರ್ ನಗರ, ಬಾಗ್ ಪತ್, ಅಲಿಗಢ, ಸಹಾನರ್ ಪುರ, ಪ್ರಯಾಗ್ ರಾಜ್ ಮುಂತಾದ ಊರುಗಳಲ್ಲಿರುವ ಕೆಜಿಬಿವಿ ಶಾಲೆಗಳ ಪಟ್ಟಿಯಲ್ಲೂ ಪತ್ತೆಯಾಗಿದೆ. 

ಅಂದಾಜಿನ ಪ್ರಕಾರ 2020ರ ಫೆಬ್ರವರಿ ತಿಂಗಳವರೆಗೆ ಈಕೆಗೆ ರೂ. 1 ಕೋಟಿ ವೇತನ ಸಂದಾಯವಾಗಿದೆ. ಇದರೊಂದಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಶಿಕ್ಷಕಿ ನಾಪತ್ತೆಯಾಗಿದ್ದಾರೆ. 

ರಾಯ್ ಬರೇಲಿ ಜಿಲ್ಲಾ ಶಿಕ್ಷಣ ಇಲಾಖೆ ನೀಡಿದ ನೋಟಿಸ್'ಗೂ ಉತ್ತರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ರೂ. 1 ಕೋಟಿ ಹಣ ಈಕೆಯೇ ಒಂದೇ ಬ್ಯಾಂಕ್ ಖಾತೆಗೆ ಸಂದಾಯವಾಗಿದೆಯೇ ಎಂಬ ಸಂಗತಿ ಖಚಿತಪಟ್ಟಿಲ್ಲ. ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿ, ಶಿಕ್ಷಕಿ ಏಕಕಾಲಕ್ಕೆ 25 ಶಾಲೆಗಳಲ್ಲಿ ಕೆಲಸ ಮಾಡಿರುವ ಸಂಗತಿ ಇನ್ನೂ ದೃಢಪಟ್ಟಿಲ್ಲ. ತನಿಖೆ ನಡೆಸುತ್ತಿದ್ದೇವೆಂದು ಹೇಳಿದೆ. 

SCROLL FOR NEXT