ಲಡಾಕ್ ನಲ್ಲಿ ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆಯೇ: ರಕ್ಷಣಾ ಸಚಿವರಿಗೆ ರಾಹುಲ್ ಗಾಂಧಿ ಪ್ರಶ್ನೆ
ಲಡಾಖ್‌ನಲ್ಲಿ ಚೀನಾ ಜೊತೆಗಿನ ಗಡಿರೇಖೆ ಬಿಕ್ಕಟ್ಟಿನ ಕುರಿತು ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಲಡಾಕ್‌ನಲ್ಲಿ ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆಯೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ.
ನವದೆಹಲಿ: ಲಡಾಖ್‌ನಲ್ಲಿ ಚೀನಾ ಜೊತೆಗಿನ ಗಡಿರೇಖೆ ಬಿಕ್ಕಟ್ಟಿನ ಕುರಿತು ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಲಡಾಕ್‌ನಲ್ಲಿ ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆಯೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ.
ರಾಜನಾಥ್ ಸಿಂಗ್ ಅವರ ಸೋಮವಾರದ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿರುವ ರಾಹುಲ್, ಮಂಗಳವಾರದ ಟ್ವೀಟ್‌ನಲ್ಲಿ, '' ಕಾಂಗ್ರೆಸ್ ಪಕ್ಷದ ಚಿಹ್ನೆಯ ಕುರಿತು ಕಮೆಂಟ್ ಮಾಡಿರುವ ರಕ್ಷಣಾ ಸಚಿವರು ಚೀನಾದವರು ಭಾರತೀಯ ಭೂಪ್ರದೇಶವನ್ನು ಲಡಾಖ್‌ನಲ್ಲಿ ಆಕ್ರಮಿಸಿಕೊಂಡಿದ್ದಾರೆಯೇ? ಉತ್ತರಿಸಿ” ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಟೀಕಿಸುವ ಬದಲು ರಕ್ಷಣಾ ಸಚಿವರು ರಾಹುಲ್ ಗಾಂಧಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಬೇಕು ಎಂದು ಎಐಸಿಸಿ ಮಾಧ್ಯಮ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಗಡಿ ವಿಚಾರದಲ್ಲಿ ಅಮಿತ್ ಶಾ ಅವರ ವಿರುದ್ಧ ರಾಹುಲ್ ನಡೆಸಿದ ವಾಗ್ದಾಳಿಗೆ ಕಾವ್ಯಾತ್ಮಕ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್ "ಕೈಯಲ್ಲಿ ನೋವು ಇದ್ದಾಗ ಚಿಕಿತ್ಸೆ ಪಡೆಯಬಹುದು. ಆದರೆ ಕೈಗೇ ನೋವು ಬಂದಾಗ ಏನು ಮಾಡಬೇಕು” ಎಂದು ಟ್ವೀಟ್ ಮಾಡಿದ್ದಾರೆ.
'ಕೈ' ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ನ ಚಿಹ್ನೆಯಾಗಿರುವ ಕಾರಣ ರಾಜನಾಥ್ ಸಿಂಗ್ ಟ್ವೀಟ್ ಗೆ ರಾಹುಲ್ ಗಾಂಧಿ ಕೆರಳಿದ್ದಾರೆ.
ರಾಜನಾಥ್ ಟ್ವೀಟ್ ಮಾಡಿರುವ ಕೈ ನೋವಿನ ಬಗೆಗಿನ ಸಾಲುಗಳನ್ನು 20 ನೇ ಶತಮಾನದ ಕವಿ ಮಂಜಾರ್ ಲಖನವಿ ಬರೆದಿದ್ದಾರೆ. ರಾಜನಾಥ್ ಸಿಂಗ್ ಅವರು 'ಹೃದಯ' ಎಂದಿರುವ ಕಡೆ ' ಕೈ' ಎಂದು ಬದಲಾಯಿಸಿದ್ದಾರೆ.
ಪೂರ್ವ ಲಡಾಕ್‌ನಲ್ಲಿ ಚೀನಾ ಜೊತೆಗಿನ ಜಟಾಪಟಿಗೆ ಸಂಬಂಧಿಸಿ ರಾಹುಲ್ ನಿಯಮಿತವಾಗಿ ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದಾರೆ. ಮೇ 5 ಮತ್ತು ಮೇ 6 ರಂದು ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.