ನವದೆಹಲಿ: ಭಾರತ-ಅಮೆರಿಕ ಎರಡೂ ದೇಶಗಳು ಸಹುಷ್ಣುತೆ ಹೊಂದಿರುವ ದೇಶಗಳಾಗಿರುವುದರಿಂದ ಎರಡೂ ದೇಶಗಳ ನಡುವೆ ಸಹಭಾಗಿತ್ವ ಕೆಲಸ ಮಾಡುತ್ತದೆ, ಆದರೆ ದುಃಖಕರ ವಿಷಯವೆಂದರೆ ಇತ್ತೀಚೆಗೆ ಎರಡೂ ದೇಶಗಳಲ್ಲಿ ಸಹಿಷ್ಣುತೆ ಎಂಬ ಡಿಎನ್ಎ ಕಣ್ಮರೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹಾರ್ವರ್ಡ್ ಕೆನ್ನೆಡಿ ಸ್ಕೂಲ್ ನ ರಾಯಭಾರಿ ಪ್ರೊಫೆಸರ್ ನಿಖೊಲಸ್ ಬರ್ನ್ಸ್ ಜೊತೆ ವಿಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ಎರಡೂ ದೇಶಗಳು ಸಹಿಷ್ಣುತೆಯನ್ನು ಹೊಂದಿರುವ ದೇಶಗಳಾಗಿದ್ದರಿಂದ ನಮ್ಮ ಸಹಭಾಗಿತ್ವ ಕೆಲಸ ಮಾಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಸಹಿಷ್ಣುತೆ ಎಂಬುದು ನಮ್ಮಲ್ಲಿ ಕಣ್ಮರೆಯಾಗುತ್ತಿದೆ. ಹಿಂದೆ ನಮ್ಮ ಎರಡೂ ದೇಶಗಳಲ್ಲಿದ್ದಂತಹ ಸಹಿಷ್ಣುತೆ ಇಂದು ಕಾಣುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಿಖೊಲಸ್ ಬರ್ನ್ಸ್ ನ್ಯಾಟೊದ ಮಾಜಿ ರಾಯಭಾರಿಯಾಗಿದ್ದವರು. ಮಾತುಕತೆ ವೇಳೆ ಜಾರ್ಜ್ ಬರ್ನ್ಸ್ ಅಮೆರಿಕದಲ್ಲಿ ಇತ್ತೀಚೆಗೆ ಜಾರ್ಜ್ ಫ್ಲೈಯ್ಡ್ ಹತ್ಯೆಯನ್ನು ಭೀಕರ ಎಂದು ಬಣ್ಣಿಸಿದರು. ಅಮೆರಿಕದಲ್ಲಿ ಆತನ ಸಾವನ್ನು ಜನರು ಪ್ರತಿಭಟಿಸುತ್ತಿದ್ದಾರೆ. ಈ ಘಟನೆ ಅಮೆರಿಕದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಜನಾಂಗೀಯ ನಿಂದನೆ, ತಾರತಮ್ಯಗಳ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ನಾವು ಇದರ ವಿರುದ್ಧ ಪ್ರತಿಭಟಿಸುತ್ತಿದ್ದು ಅದು ನಮ್ಮ ಹಕ್ಕು. ಭಾರತದಲ್ಲಿ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವಂತೆ ಲಕ್ಷಾಂತರ ಅಮೆರಿಕನ್ನರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿದ್ದಾರೆ. ಭಾರತ ಮತ್ತು ಅಮೆರಿಕ ಅನೇಕ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತವೆ, ಏಕೆಂದರೆ ಎರಡೂ ರಾಷ್ಟ್ರಗಳು ಬ್ರಿಟಿಷರಿಂದ ಹಕ್ಕುಗಳನ್ನು ಪಡೆದುಕೊಂಡವರು ಎಂದರು. ಅಮೆರಿಕದಲ್ಲಿ ತೀವ್ರ ಮಟ್ಟದಲ್ಲಿ ರಾಜಕೀಯ ಮತ್ತು ಅಸ್ತಿತ್ವದ ಸಮಸ್ಯೆಗಳು ಕಾಣುತ್ತಿವೆ ಎಂದು ಬರ್ನ್ಸ್ ರಾಹುಲ್ ಗಾಂಧಿಯೊಂದಿಗೆ ಹಂಚಿಕೊಂಡರು.