ದೇಶ

ನೋಡುತ್ತಿರಿ, ಸದ್ಯದಲ್ಲೇ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಜನರು ಭಾರತದೊಂದಿಗೆ ಸೇರಲು ಬಯಸುತ್ತಾರೆ: ರಾಜನಾಥ್ ಸಿಂಗ್

Sumana Upadhyaya

ಶ್ರೀನಗರ: ಹಿಂದೆ ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತು ಐಸಿಸ್ ಬಾವುಟಗಳನ್ನು ತೋರಿಸಿಕೊಂಡು ಕಾಶ್ಮೀರ ಆಜಾದ್ ಎಂದು ಘೋಷಣೆಗಳನ್ನು ಕೂಗುವುದನ್ನು ನೋಡುತ್ತಿದ್ದೆವು. ಆದರೆ ಇಂದು ಅಲ್ಲಿ ಭಾರತದ ಬಾವುಟಗಳು ಮಾತ್ರ ಕಾಣುತ್ತವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಜಮ್ಮು ಜನ ಸಂವಾದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಸ್ವಲ್ಪ ಸಮಯ ಕಾಯಿರಿ, ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಜನರು ಸದ್ಯದಲ್ಲಿಯೇ ಭಾರತದೊಳಗೆ ಬರಬೇಕೆಂದು ಕೇಳುತ್ತಾರೆಯೇ ಹೊರತು ಪಾಕಿಸ್ತಾನದ ಆಡಳಿತದಡಿಯಲ್ಲಿ ಇರಲು ಬಯಸುವುದಿಲ್ಲ. ಇದು ನಡೆದಾಗ ನಮ್ಮ ಸಂಸತ್ತಿನ ಗುರಿ ಮತ್ತು ಉದ್ದೇಶ ಈಡೇರುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಡಿ ಜಮ್ಮು-ಕಾಶ್ಮೀರದ ಹಣೆಬರಹ ಬದಲಾಗಲಿದ್ದು, ಅವರ ನೇತೃತ್ವದಲ್ಲಿ ಜಮ್ಮು-ಕಾಶ್ಮೀರ ಹೊಸ ಉತ್ತುಂಗಕ್ಕೆ ಏರಲಿದೆ.ಅವರ ನಾಯಕತ್ವದಡಿ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ್ದು ಬಹಳ ಮಹತ್ವದ ನಿರ್ಧಾರ. ಇದು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ತೆಗೆದುಕೊಂಡ ಕಠಿಣ ನಿರ್ಣಯ ಎಂದರು.

ಜನಸಂಘದ ಸಮಯದಲ್ಲಿ ನಾವು ಕೊಟ್ಟಿದ್ದ ಮಾತಿನಂತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ವಿಧಿ 370 ಮತ್ತು 35ಎಯನ್ನು ಸರ್ಕಾರ ರಚಿಸಿದ 100 ದಿನಗಳೊಳಗೆ ತೆಗೆದುಹಾಕಲಾಗಿದೆ. ಇದು ಎನ್ ಡಿಎ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಹಿಂದೆ ಜಾಗತಿಕ ಶಕ್ತಿಶಾಲಿ ದೇಶಗಳು ಕಾಶ್ಮೀರ ವಿವಾದ ವಿಚಾರದಲ್ಲಿ ಪಾಕಿಸ್ತಾನ ಪರವಾಗಿ ಮಾತನಾಡುತ್ತಿದ್ದವು. ಆದರೆ ಇಂದು ಅಂತಹ ವಾತಾವರಣವಿಲ್ಲ. ಭಾರತದ ಪರವಾಗಿವೆ ದೇಶಗಳು ಎಂದು ಸಂತೋಷದಿಂದ ಹೇಳಿದರು.

ಚೀನಾದೊಂದಿಗೆ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಯುತ್ತಿದೆ. ಮಾತುಕತೆ ಮೂಲಕ ಬಗೆಹರಿಸಲು ಚೀನಾ ಕೂಡ ಒಲವು ತೋರಿದೆ. ನಮ್ಮ ಸರ್ಕಾರ ಯಾರನ್ನೂ ಕತ್ತಲೆಯಲ್ಲಿಡಲು ಬಯಸುವುದಿಲ್ಲ ಎಂದು ವಿರೋಧ ಪಕ್ಷದವರಿಗೆ ಹೇಳಲು ಇಚ್ಛಿಸುತ್ತೇನೆ. ರಾಷ್ಟ್ರದ ಗೌರವದ ವಿಚಾರ ಬಂದಾಗ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮತ್ತೊಮ್ಮೆ ಸಾರಿದರು.

ವಿದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ನಾವೇ ತಯಾರಿಸುವಂತಾಗಬೇಕು ಎಂಬುದು ನಮ್ಮ ಸರ್ಕಾರದ ಗುರಿಯಾಗಿದೆ. ಆಮದು ದೇಶ ಎಂದು ಕರೆಸಿಕೊಳ್ಳದೆ ರಫ್ತು ದೇಶ ಎಂದು ಜಗತ್ತಿನಲ್ಲಿ ಭಾರತ ಕರೆಸಿಕೊಳ್ಳಬೇಕು ಎಂಬುದೇ ನಮ್ಮ ಆಸೆ ಎಂದರು.

SCROLL FOR NEXT