ದೇಶ

ರಾಜಸ್ತಾನ ರಾಜಕೀಯ: ಕಾಂಗ್ರೆಸ್ ಆಯ್ತು, ಈಗ ಬಿಜೆಪಿ ಶಾಸಕರು ಜೈಪುರ ಹೊರವಲಯದ ರೆಸಾರ್ಟ್ ಗೆ ಶಿಫ್ಟ್!

Sumana Upadhyaya

ಜೈಪುರ: ಇದೇ 19ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ಕುದುರೆ ವ್ಯಾಪಾರ ನಡೆಸಿ ತನ್ನ ಶಾಸಕರನ್ನು ಸೆಳೆದುಕೊಳ್ಳಬಹುದು ಎಂಬ ಭಯದಿಂದ ರಾಜಸ್ತಾನ ಕಾಂಗ್ರೆಸ್, ಶಾಸಕರನ್ನು ಜೆಡಬ್ಲ್ಯು ಮ್ಯಾರಿಯಟ್ ಹೊಟೇಲ್ ನಲ್ಲಿ ಇರಿಸಿದ್ದರೆ ಇತ್ತ ಬಿಜೆಪಿ ಕೂಡ ತನ್ನ ಶಾಸಕರನ್ನು ಮತ್ತೊಂದು ಐಷಾರಾಮಿ ರೆಸಾರ್ಟ್ ಗೆ ಕಳುಹಿಸಿದೆ.

ಕೊರೋನಾ ಕ್ವಾರಂಟೈನ್ ಸಮಯದಲ್ಲಿ ರಾಜಸ್ತಾನ ರಾಜಕೀಯದಲ್ಲಿ ರಾಜಕೀಯ ಕ್ವಾರಂಟೈನ್ ವಾತಾವರಣ ನಿರ್ಮಾಣವಾಗಿದ್ದು ರಾಜ್ಯಸಭೆ ಚುನಾವಣೆ ಸಮಯದಲ್ಲಿ ಶಾಸಕರನ್ನು ಕುದುರೆ ವ್ಯಾಪಾರ ಮೂಲಕ ಖರೀದಿಸುವ ಪರಿಸ್ಥಿತಿ ಇರುವುದರಿಂದ 200 ಶಾಸಕರಲ್ಲಿ ಸುಮಾರು 190ಕ್ಕೂ ಹೆಚ್ಚು ಶಾಸಕರು ರಾಜಕೀಯ ಕ್ವಾರಂಟೈನ್ ಗೆ ಇನ್ನು ಸ್ವಲ್ಪ ದಿನಗಳವರೆಗೆ ಒಳಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಐಎಎನ್ಎಸ್ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ತರಬೇತಿ ಮತ್ತು ಇನ್ನಿತರ ಉದ್ದೇಶಗಳಿಗಾಗಿ ನಮ್ಮ ಶಾಸಕರನ್ನು ರೆಸಾರ್ಟ್ ಗೆ ಕಳುಹಿಸಲು ತಿಂಗಳ ಹಿಂದೆಯೇ ನಿರ್ಧರಿಸಿದ್ದೆವು. ಇಂದು ಮಧ್ಯಾಹ್ನ ನಮ್ಮ ಶಾಸಕರೊಂದಿಗೆ ಸಭೆ ನಡೆಸಲಿದ್ದು ನಂತರ ಇನ್ನೂ ಎರಡು ದಿನ ಅವರು ರೆಸಾರ್ಟ್ ನಲ್ಲಿಯೇ ಇರುತ್ತಾರೆ. ರಾಜ್ಯಸಭೆ ಚುನಾವಣೆಯ ವೋಟಿಂಗ್ ಮತ್ತು ಇತರ ಶಾಸಕಾಂಗ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ನಾಡಿದ್ದು 18ರಂದು ಜೈಪುರಕ್ಕೆ ಆಗಮಿಸಿ ಅವರು ಸಹ ಶಾಸಕರೊಂದಿಗೆ ರೆಸಾರ್ಟ್ ನಲ್ಲಿರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ ಕ್ರಾಸ್ ವೋಟಿಂಗ್ ಭಯ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಕಾಡುತ್ತಿದ್ದು 20ರಿಂದ 30ರಷ್ಟು ಮಂದಿ ಹೊಸ ಶಾಸಕರಿದ್ದಾರೆ. ಅವರು ಇದುವರೆಗೆ ರಾಜ್ಯಸಭೆ ಚುನಾವಣೆಗೆ ಮತ ಹಾಕಿಲ್ಲ. ಹೀಗಾಗಿ ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಯಾವ ರೀತಿ ಮತ ಹಾಕಬೇಕು ಎಂದು ಸರಿಯಾದ ತರಬೇತಿ ನೀಡಬೇಕಿದೆ ಎಂದು ಮೂಲಗಳು ಹೇಳುತ್ತವೆ.

SCROLL FOR NEXT