ದೇಶ

ಮಧ್ಯ ಪ್ರದೇಶ ರಾಜ್ಯಪಾಲ ಲಾಲ್ ಜೀ ಟಂಡನ್ ಆರೋಗ್ಯ ಗಂಭೀರ, ಆದರೂ ಚಿಕಿತ್ಸೆಗೆ ಸ್ಪಂದನೆ: ಆಸ್ಪತ್ರೆ ಹೇಳಿಕೆ

Srinivasamurthy VN

ಲಖನೌ: ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿರುವ ಮಧ್ಯ ಪ್ರದೇಶ ರಾಜ್ಯಪಾಲ ಲಾಲ್ ಜೀ ಟಂಡನ್ ಅವರ ಆರೋಗ್ಯ ಗಂಭೀರವಾಗಿದೆಯಾದರೂ, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಾಲ್ ಜೀ ಟಂಡನ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿ.  ಮೂಲಗಳ ಪ್ರಕಾರ ಇಲ್ಲಿನ ಮೆಡಾಂಟ ಆಸ್ಪತ್ರೆಯಲ್ಲಿ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ರಾಕೇಶ್ ಕಪೂರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನಾವೆಲ್ಲರೂ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇವೆ. ನಮ್ಮ ಆಸ್ಪತ್ರೆಯ ನುರಿತ ವೈದ್ಯರ ತಂಡವೊಂದು ಲಾಲ್ ಜೀ ಟಂಡನ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರನ್ನು ದಿನದ 24 ಗಂಟೆಯೂ ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ನಿನ್ನೆಯಷ್ಟೇ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರು, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಲಾಲ್ ಜೀ ಟಂಡನ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಆನಂದಿ ಬೆನ್ ಪಟೇಲ್ ಅವರು ಕುಟಂಬಸ್ಥರಿಗೆ ಧೈರ್ಯ ಹೇಳಿದರು. 

ಜೂನ್ 11ರಂದು ಲಾಲ್ ಜೀ ಟಂಡನ್ ಅವರು ಉಸಿರಾಟದ ತೊಂದರೆ, ಮೂತ್ರಕೋಶ ತೊಂದರೆ ಮತ್ತು ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

SCROLL FOR NEXT