ದೇಶ

ಪ್ರಧಾನಿ ಮೋದಿ ಮಾತನಾಡುವಾಗ ಅದರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು: ಡಾ. ಮನಮೋಹನ್ ಸಿಂಗ್

Sumana Upadhyaya

ನವದೆಹಲಿ: ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಸಂಘರ್ಷದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ತಾವು ಆಡುವ ಮಾತುಗಳ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ತನ್ನ ಸ್ಥಾನದ ಸಮರ್ಥನೆ ಮಾಡಿಕೊಳ್ಳಲು ಚೀನಾಕ್ಕೆ ಬಿಡಬಾರದು ಎಂದು ಹೇಳಿದ್ದಾರೆ.

ತಪ್ಪು ಮಾಹಿತಿ ಕೊಡುವುದು ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಲ್ಲ ಎಂದು ಹೇಳಿರುವ ಮಾಜಿ ಪ್ರಧಾನಿ, ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಂಡು ಗಡಿಭಾಗದಲ್ಲಿ ಮೊನ್ನೆ ವೀರ ಮರಣ ಹೊಂದಿದ ಸೈನಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ.

ಈ ವಿಷಯದಲ್ಲಿ ಏನೂ ಕ್ರಮ ಕೈಗೊಳ್ಳದಿದ್ದರೆ ಅಥವಾ ಅನ್ಯಾಯ ಮಾಡಿದರೆ ದೇಶದ ಜನರ ನಂಬಿಕೆಗೆ ದ್ರೋಹವೆಸಗಿದಂತೆ ಎಂದು ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.

ದೇಶವು ಐತಿಹಾಸಿಕ ಕಾಲಘಟ್ಟದಲ್ಲಿ ನಿಂತಿದ್ದು, ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಭವಿಷ್ಯದ ಪೀಳಿಗೆಗಳು ನಮ್ಮನ್ನು ಹೇಗೆ ಗ್ರಹಿಸುತ್ತವೆ ಎಂಬುದರ ಬಗ್ಗೆ ಗಂಭೀರವಾದ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ.

ದೇಶದಲ್ಲಿ ನಮ್ಮನ್ನು ಮುನ್ನಡೆಸುವವರಿಗೆ ಜವಾಬ್ದಾರಿ, ಕರ್ತವ್ಯಗಳಿರುತ್ತದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಆ ಜವಾಬ್ದಾರಿ ಪ್ರಧಾನ ಮಂತ್ರಿಯ ಕಚೇರಿಯ ಮೇಲಿದೆ. ನಮ್ಮ ರಾಷ್ಟ್ರದ ಭದ್ರತೆಯ ಹಿತದೃಷ್ಟಿಯಿಂದ ಕಾರ್ಯತಂತ್ರ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಗ್ಗೆ ಅವರು ಆಡುವ ಮಾತುಗಳು ಮತ್ತು ಘೋಷಣೆಗಳ ಪರಿಣಾಮಗಳನ್ನು ಪ್ರಧಾನಿ ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.

SCROLL FOR NEXT