ದೇಶ

ಭಾರತದಲ್ಲಿ ಕೊವಿಡ್-19 ನಿಂದ ಲಕ್ಷಕ್ಕೆ ಒಬ್ಬರು ಸಾವು, ಇದು ವಿಶ್ವದಲ್ಲೇ ಅತ್ಯಂತ ಕಡಿಮೆ: ಕೇಂದ್ರ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಸಾವಿನ ಪ್ರಮಾಣ ವಿಶ್ವದಲ್ಲಿ ಲಕ್ಷಕ್ಕೆ 6.4 ಇದ್ದರೆ ಭಾರತದಲ್ಲಿ ಕೇವಲ ಒಂದು ಇದೆ ಮತ್ತು ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.

ಕೊವಿಡ್-19 ಪ್ರಕರಣಗಳ ಸಮಯೋಚಿತ ಪತ್ತೆ, ವ್ಯಾಪಕವಾದ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಪರಿಣಾಮಕಾರಿ ಚಿಕಿತ್ಸೆಯೇ ಮರಣ ಪ್ರಮಾಣ ಅತ್ಯಂತ ಕಡಿಮೆ ಇರುವುದಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಕೊರೋನಾ ವೈರಸ್ ನಿಂದ ಕಳೆದ 24 ಗಂಟೆಯಲ್ಲಿ 312 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 14,011ಕ್ಕೆ ಏರಿಕೆಯಾಗಿದೆ ಮತ್ತು ಹೊಸದಾಗಿ 14, 933 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,40,215ಕ್ಕೆ ಏರಿಕೆಯಾಗಿದೆ.

ಸಾವಿನ ಪ್ರಮಾಣ ಬ್ರಿಟನ್ ನಲ್ಲಿ ಅತಿ ಹೆಚ್ಚು ಇದ್ದು, ಪ್ರತಿ ಲಕ್ಷ ಜನಸಂಖ್ಯೆಗೆ 63.13 ಮಂದಿ ಕೊರೋನಾ ವೈರಸ್ ಗೆ ಬಲಿಯಾಗುತ್ತಿದ್ದಾರೆ. ಸ್ಪೇನ್‌ ಎರಡನೇ ಸ್ಥಾದಲ್ಲಿದ್ದು, ಪ್ರತಿ ಲಕ್ಷಕ್ಕೆ 60.60, ಹಾಗೂ ಮೂರನೇ ಸ್ಥಾನದಲ್ಲಿರುವ ಇಟಲಿಯಲ್ಲಿ 57.19, ಅಮೆರಿಕದಲ್ಲಿ 36.30, ಜರ್ಮನಿಯಲ್ಲಿ 27.32, ಬ್ರೆಜಿಲ್ ನಲ್ಲಿ 23.68 ಮತ್ತು ರಷ್ಯಾದಲ್ಲಿ 5.62 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಉಲ್ಲೇಖಿಸಿ ಮಾಹಿತಿ ನೀಡಿದೆ.

ಇನ್ನು ದೇಶದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ಇದುವರೆಗೆ ಶೇ. 56.38ರಷ್ಟು ಕೊರೋನಾ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

SCROLL FOR NEXT