ದೇಶ

'ನಾನು ಇಂದಿರಾ ಗಾಂಧಿ ಮೊಮ್ಮಗಳು': ಉತ್ತರ ಪ್ರದೇಶ ಸರ್ಕಾರ ವಿರುದ್ಧ ಹರಿಹಾಯ್ದ ಪ್ರಿಯಾಂಕಾ ಗಾಂಧಿ

Sumana Upadhyaya

ನವದೆಹಲಿ: ನಾನು ಇಂದಿರಾ ಗಾಂಧಿಯವರ ಮೊಮ್ಮಗಳು, ಬಿಜೆಪಿಯ ಕೆಲವು ಅಘೋಷಿತ ವಕ್ತಾರರಂತೆ ನಾನು ಅಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.

ಸತ್ಯ ಹೇಳುವುದಕ್ಕೆ ಅನೇಕ ರೀತಿಯಲ್ಲಿ ಉತ್ತರ ಪ್ರದೇಶ ಸರ್ಕಾರ ತಮ್ಮ ಮೇಲೆ ಬೆದರಿಕೆಯೊಡ್ಡುತ್ತಿದೆ ಎಂದು ಸಹ ಆಪಾದಿಸಿದ್ದಾರೆ. ಉತ್ತರ ಪ್ರದೇಶ ಮಕ್ಕಳ ಹಕ್ಕು ಆಯೋಗ ನಿನ್ನೆ ಪ್ರಿಯಾಂಕಾ ಗಾಂಧಿಯವರಿಗೆ ನೊಟೀಸ್ ಜಾರಿ ಮಾಡಿತ್ತು, ಕಾನ್ಪುರ್ ನಿರಾಶ್ರಿತರ ಮನೆ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆಳೆಯುವ ರೀತಿಯಲ್ಲಿ ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದಾರೆ, ಈ ಬಗ್ಗೆ ಮೂರು ದಿನಗಳೊಳಗೆ ವಿವರಣೆ ಕೊಡಿ ಎಂದು ನೊಟೀಸ್ ಜಾರಿ ಮಾಡಿತ್ತು.

ಕಳೆದ ಭಾನುವಾರ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ಪ್ರದೇಶ ಸರ್ಕಾರ ವಿರುದ್ಧ ಹರಿಹಾಯ್ದಿದ್ದ ಪ್ರಿಯಾಂಕಾ ಗಾಂಧಿ ಸರ್ಕಾರದ ನಿರಾಶ್ರಿತ ಕೇಂದ್ರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂತಹ ಕೇಂದ್ರಗಳಲ್ಲಿ ನಡೆಯುವ ಅಕ್ರಮಗಳನ್ನು ಸರ್ಕಾರ ಮುಚ್ಚಿಹಾಕುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಆರೋಪಿಸಿದ್ದರು.

ನಾಗರಿಕರ ಸೇವಕಳಾಗಿ  ಉತ್ತರ ಪ್ರದೇಶ ರಾಜ್ಯದ ಜನರ ಸೇವೆ ಮಾಡುವುದು ನನ್ನ ಕೆಲಸ. ಜನರ ಮುಂದೆ ಸತ್ಯ ಸಂಗತಿಯನ್ನು ತೆರೆದಿಡಬೇಕೆ ಹೊರತು ಸರ್ಕಾರದ ಸುಳ್ಳು ಪ್ರಚಾರವನ್ನಲ್ಲ. ಉತ್ತರ ಪ್ರದೇಶ ಸರ್ಕಾರ ಹಲವು ಮಾರ್ಗಗಳ ಮೂಲಕ ನನ್ನನ್ನು ಬೆದರಿಸಲು ನೋಡಿ ಸಮಯ ಹಾಳುಮಾಡುತ್ತಿದೆ. ಅವರಿಗೆ ಇಷ್ಟಬಂದಂತೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ, ಆದರೆ ನಾನು ಸತ್ಯವನ್ನು ಹೊರಗೆ ತರುವುದನ್ನು ಬಿಡುವುದಿಲ್ಲ. ನಾನು ಇಂದಿರಾ ಗಾಂಧಿಯವರ ಮೊಮ್ಮಗಳು, ಅಘೋಷಿತ ಬಿಜೆಪಿ ವಕ್ತಾರರಂತಲ್ಲ ಎಂದು ಆಕ್ರೋಶದಿಂದ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

SCROLL FOR NEXT