ದೇಶ

ಮಧ್ಯಪ್ರದೇಶ: ಹೋಟೆಲ್ ನಿಂದ ನಾಪತ್ತೆಯಾಗಿದ್ದ ಆರು ಶಾಸಕರು ಕಾಂಗ್ರೆಸ್ ಗೆ ವಾಪಸ್, ಆದರೆ ಇತರ ನಾಲ್ವರು ಕರ್ನಾಟಕಕ್ಕೆ ಶಿಫ್ಟ್

Srinivasamurthy VN

ಭೋಪಾಲ್: ಮಧ್ಯಪ್ರದೇಶದಲ್ಲಿ ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆ ಗರಿಗೆದರಿದೆ ಎನ್ನುವಾಗಲೇ ನಾಪತ್ತೆಯಾಗಿದ್ದ ಶಾಸಕರ ಪೈಕಿ, ಆರು ಮಂದಿ ಕಾಂಗ್ರೆಸ್ ಶಾಸಕರು ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಆಡಳಿತಾರೂಢ ಕಾಂಗ್ರೆಸ್ ಮತ್ತು ಮಧ್ಯ ಪ್ರದೇಶದ ಸರ್ಕಾರಕ್ಕೆ ಬೆಂಬಲ ನೀಡಿದ್ದ ಶಾಸಕರೂ ಸೇರಿದಂತೆ ಒಟ್ಟು ಆರು ಶಾಸಕರು ಐಟಿಸಿ ರೆಸಾರ್ಟ್ ಗೆ ವಾಪಸ್ ಆಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ ಉಳಿದ ಮೂರು ಕಾಂಗ್ರೆಸ್ ಶಾಸಕರು ಮತ್ತು ಓರ್ವ ಪಕ್ಷೇತರ ಶಾಸಕ ಸೇರಿದಂತೆ ಒಟ್ಟು ನಾಲ್ಕು ಶಾಸಕರು ಮಾತ್ರ ಇನ್ನು ನಾಪತ್ತೆಯಾಗಿದ್ದು, ಅವರು ಕರ್ನಾಟಕಕ್ಕೆ ಶಿಫ್ಟ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಸ್ತುತ ರೆಸಾರ್ಟ್ ಗೆ ವಾಪಸ್ ಆಗಿರುವ ಶಾಸಕರನ್ನು ಸಾನಿವ್ ಸಿಂಗ್ ಕುಶ್ವಾ (ಬಿಎಸ್ಪಿ), ರಾಂಬೈ ಠಾಕೂರ್ (ಅಮಾನತುಗೊಂಡ ಬಿಎಸ್ಪಿ ಶಾಸಕ), ರಾಜೇಶ್ ಶುಕ್ಲಾ (ಎಸ್ಪಿ), ರಣವೀರ್ ಜಾತವ್, ಕಮಲೇಶ್ ಜಾತವ್ ಮತ್ತು ಐದಾಲ್ ಸಿಂಗ್ ಕನ್ಸಾನಾ (ಎಲ್ಲಾ ಕಾಂಗ್ರೆಸ್ ಶಾಸಕರು) ಎಂದು ಗುರುತಿಸಲಾಗಿದೆ. ಎಲ್ಲರೂ ಗುರುಗ್ರಾಮದಲ್ಲಿರುವ ಪ್ರೀಮಿಯರ್ ಹೊಟೆಲ್ ನಲ್ಲಿ ಬಿಜೆಪಿ ನಾಯಕರ ತೆಕ್ಕೆಯಲ್ಲಿದ್ದರು ಎನ್ನಲಾಗಿದೆ.

ಉಳಿದಂತೆ ಎಚ್.ಎಸ್. ಡ್ಯಾಂಗ್, ಬಿಸಾಹು ಲಾಲ್ ಸಿಂಗ್ ಮತ್ತು ಇನ್ನೊಬ್ಬ ಕಾಂಗ್ರೆಸ್ ಶಾಸಕ ಮತ್ತು ಸ್ವತಂತ್ರ ಶಾಸಕ ಸುರೇಂದ್ರ ಸಿಂಗ್ ಶೇರಾ ಅವರನ್ನು ಬಿಜೆಪಿ ನಾಯಕರು ಕರ್ನಾಟಕ್ಕೆ ಕರೆದುಕೊಂಡು ಬಂದ್ದಿದ್ದು, ಬೆಂಗಳೂರು ಅಥವಾ ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಮೂಲಗಳು ತಿಳಿಸಿರುವಂತೆ ಆಪರೇಷನ್ ಹೋಳಿ ಹೆಸರಿನಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿರುವ ಒಬ್ಬ ಬಿಎಸ್ಪಿ, ಒಬ್ಬರು ಅಮಾನತುಗೊಂಡ ಬಿಎಸ್ಪಿ, ಒಬ್ಬ ಎಸ್ಪಿ ಮತ್ತು ಒಬ್ಬರು ಪೇಕ್ಷತರ ಶಾಸಕರು ಮತ್ತು ಆರು ಕಾಂಗ್ರೆಸ್ ಶಾಸಕರನ್ನು ಗುರುಗ್ರಾಮ ಮತ್ತು ಪಾಣಿಪತ್ ರೆಸಾರ್ಟ್ ಗೆ ರಾಜ್ಯದ ಪ್ರಭಾವಿ ಬಿಜೆಪಿ ಶಾಸಕರು ಶಿಫ್ಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಮಂತ್ರಿಗಳಾದ ನರೋತ್ತಮ್ ಮಿಶ್ರಾ, ಭೂಪೇಂದ್ರ ಸಿಂಗ್, ರಾಂಪಾಲ್ ಸಿಂಗ್, ಸಂಜಯ್ ಪಾಠಕ್, ವಿಶ್ವಸ್ ಸಾರಂಗ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರ ಕಾಯುತ್ತಿದ್ದಾರೆ ಎನ್ನಲಾಗಿದೆ.

ಶಾಸಕರಿಗೆ 30 ಕೋಟಿ ಹಣದ ಆಮಿಷ
ರಾಜ್ಯಸಭೆಗೆ ಮಧ್ಯ ಪ್ರದೇಶದಿಂದ ಮೂವರು ಸದಸ್ಯರ ಆಯ್ಕೆಗಾಗಿ ಮಾರ್ಚ್ 26ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ನಮ್ಮ ಶಾಸಕರಿಗೆ 30 ಕೋಟಿ ರೂ ಹಣದ ಆಮಿಷವೊಡ್ಡಿದೆ. ಬಿಜೆಪಿಯು ಹಣದ ಆಮಿಷವೊಡ್ಡುತ್ತಿದೆ ಎಂದು ಅನೇಕ ಶಾಸಕರು ನನ್ನ ಬಳಿ ಹೇಳಿದ್ದಾರೆ. 15 ವರ್ಷಗಳ ಆಡಳಿತದ ವೇಳೆ ಮಾಡಿದ್ದ ಅಕ್ರಮಗಳು ಈಗ ಬಯಲಾಗಬಹುದು ಎಂಬ ಆತಂಕ ಬಿಜೆಪಿಯವರಲ್ಲಿದೆ. ಹೀಗಾಗಿ ಅವರು ಸರ್ಕಾರ ಪತನಗೊಳಿಸಲು ಯತ್ನಿಸುತ್ತಿದ್ದಾರೆ  ಎಂದು ಕಮಲನಾಥ್ ಆರೋಪಿಸಿದ್ದಾರೆ.

SCROLL FOR NEXT