ದೇಶ

ಈ ವರ್ಷ ಪ್ರಧಾನಿ ಮೋದಿ ಹೋಳಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸುತ್ತಿಲ್ಲ, ಕಾರಣವೇನು ಗೊತ್ತೇ? 

Sumana Upadhyaya

ನವದೆಹಲಿ: ಈಗ ಎಲ್ಲಿ ನೋಡಿದರೂ ಕೊರೊನಾ ವೈರಸ್ ಹಾವಳಿಯದ್ದೇ ಸುದ್ದಿ. ಭಾರತಕ್ಕೆ ಕಾಲಿಟ್ಟಿರುವ ಈ ವೈರಸ್ ಆರು ಮಂದಿಯಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


ಈ ಹಿನ್ನೆಲೆಯಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೇಂದ್ರ ಆರೋಗ್ಯ ಇಲಾಖೆ ಸೇರಿದಂತೆ ಆಯಾ ರಾಜ್ಯ ಸರ್ಕಾರಗಳು ಜನರಲ್ಲಿ ಮೂಡಿಸಲು ಪ್ರಯತ್ನಿಸುತ್ತಿವೆ.


ಪ್ರಧಾನಿ ಮೋದಿಯವರು ಸಹ ಈ ಬಗ್ಗೆ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇನೆಂದರೆ ಈ ವರ್ಷ ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳದಿರುವುದು. ಸಾಮಾನ್ಯವಾಗಿ ಉತ್ತರ ಭಾರತೀಯರಿಗೆ ಹೋಳಿ ಹಬ್ಬವೆಂದರೆ ಹೆಚ್ಚು ಸಂಭ್ರಮ. ಮೋದಿಯವರು ಕೂಡ ಇಷ್ಟು ವರ್ಷ ಜನಸಮೂಹದೊಂದಿಗೆ ಸೇರಿ ತಮ್ಮ ಇಷ್ಟದ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದರು. ಆದರೆ ಈ ವರ್ಷ ಹೋಳಿ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

ಅದಕ್ಕೆ ಕಾರಣ ಕೊರೊನಾ ವೈರಸ್. ಕೊವಿಡ್ 19 ಎಂದು ಕರೆಯಲ್ಪಡುವ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಆರೋಗ್ಯ ತಜ್ಞರು ಜನರು ಸಾಮೂಹಿಕವಾಗಿ ಸೇರದಂತೆ ಎಚ್ಚರಿಕೆ ನೀಡಿದ್ದಾರೆ. ಜನರು ಆದಷ್ಟು ಅಲ್ಲಲ್ಲಿ ಗುಂಪು ಗುಂಪಾಗಿ ಸೇರದಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಳಿ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಪಿಎಂ ಮೋದಿ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.

SCROLL FOR NEXT