ದೇಶ

ಯೆಸ್ ಬ್ಯಾಂಕ್ ಬಿಕ್ಕಟ್ಟು: ಪ್ರಧಾನಿ ಮೋದಿ ಮತ್ತು ಅವರ ವಿಚಾರದಿಂದ ದೇಶದ ಆರ್ಥಿಕತೆ ಹಾಳಾಗುತ್ತಿದೆ: ರಾಹುಲ್ ಗಾಂಧಿ

Srinivasamurthy VN

ನವದೆಹಲಿ: ಪ್ರಧಾನಿ ಮೋದಿ ಮತ್ತು ಅವರ ವಿಚಾರದಿಂದ ದೇಶದ ಆರ್ಥಿಕತೆ ಹಾಳಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬ್ಯಾಂಕ್‌ ಹೆಸರಿನಲ್ಲಿರುವ ‘ಯೆಸ್‌’ ಪದವನ್ನೇ ಲೇವಡಿ ಮಾಡಿದ್ದಾರೆ.  ‘ನೋ ಯೆಸ್ ಬ್ಯಾಂಕ್. ಮೋದಿ ಮತ್ತು ಅವರ ವಿಚಾರಗಳು ದೇಶದ ಆರ್ಥಿಕತೆಯನ್ನೇ ಹಾಳು ಮಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮತ್ತೋರ್ವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು, ಬಿಜೆಪಿಯ ಆಡಳಿತ ಸಾಮರ್ಥ್ಯಕ್ಕೆ ಇದು ನಿದರ್ಶನ. ‘ಕಳೆದ ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ನಡೆಸುವ ಮತ್ತು ಹಣಕಾಸು ಸಂಸ್ಥೆಗಳನ್ನು ನಿರ್ವಹಿಸುವ ಅವರ ಸಾಮರ್ಥ್ಯವನ್ನು ಯೆಸ್‌ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಳಿಸಿದೆ. ಆಗ ಪಿಎಂಸಿ ಬ್ಯಾಂಕ್ ಆಯ್ತು, ಈಗ ಯೆಸ್ ಬ್ಯಾಂಕ್. ಸರ್ಕಾರಕ್ಕೆ ಏನಾದರೂ ಕಾಳಜಿ ಎಂಬುದು ಇದೆಯೇ? ತನ್ನ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವೇ? ಮತ್ತೊಂದು ಬ್ಯಾಂಕ್ ಇದೇ ಸಾಲಿನಲ್ಲಿದೆಯೇ?’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ದೆಹಲಿ ಹಿಂಸಾಚಾರದ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಲು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಿದ್ದು, ಯೆಸ್ ಬ್ಯಾಂಕ್ ಪ್ರಕರಣದ ಮೂಲಕ ಸರ್ಕಾರವನ್ನು ಹಣಿಯಲು ವಿಪಕ್ಷ ನಾಯಕರು ಪ್ರಯತ್ನ ಆರಂಭಿಸಿದ್ದಾರೆ.

SCROLL FOR NEXT