ದೇಶ

ಲೇಹ್ ನ 34 ವರ್ಷದ ಯೋಧನಲ್ಲಿ ಕೊರೋನಾ ವೈರಸ್: ಭಾರತೀಯ ಸೇನೆಯಲ್ಲಿ ಇದು ಮೊದಲ ಕೇಸ್ 

Sumana Upadhyaya

ನವದೆಹಲಿ: ಕೊರೋನಾ ಬಿಸಿ ಭಾರತೀಯ ಸೇನೆಗೂ ತಟ್ಟಿದೆ. ಜಮ್ಮು-ಕಾಶ್ಮೀರದ ಲೇಹ್ ನಲ್ಲಿ ಸೇವಾ ನಿರತರಾಗಿರುವ ಯೋಧರೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸೇನಾಪಡೆಯಲ್ಲಿ ಕಾಣಿಸಿಕೊಂಡಿರುವ ಮೊದಲ ಕೊರೋನಾ ಸೋಂಕು ಪ್ರಕರಣ ಇದಾಗಿದೆ. ಲೇಹ್ ನ ಚುಹೊಟ್ ಗ್ರಾಮದವರಾಗಿರುವ 34 ವರ್ಷದ ಸೈನಿಕನಿಗೆ ಅವರ ತಂದೆಯಿಂದ ಸೋಂಕು ತಗುಲಿದೆ. ಫೆಬ್ರವರಿ 20ರಂದು ಏರ್ ಇಂಡಿಯಾ ವಿಮಾನದಲ್ಲಿ ಇರಾನ್ ನಿಂದ ತೀರ್ಥಯಾತ್ರೆ ಮುಗಿಸಿಕೊಂಡು ಬಂದಿದ್ದ ಯೋಧನ ತಂದೆಗೆ ಕೊರೋನಾ ಕಾಣಿಸಿಕೊಂಡು ಲಡಾಕ್ ಹಾರ್ಟ್ ಫೌಂಡೇಶನ್ ಆಸ್ಪತ್ರೆಯಲ್ಲಿ ಫೆಬ್ರವರಿ 29ರಿಂದ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 


ಫೆಬ್ರವರಿ 25ರಂದು ರಜೆ ಪಡೆದುಕೊಂಡು ಮನೆಗೆ ಹೋಗಿದ್ದ ಯೋಧ ಮಾರ್ಚ್ 2ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಜ್ವರ, ಕೊರೋನಾ ಲಕ್ಷಣ ಕಂಡುಬಂದು ಮಾರ್ಚ್ 7ರಿಂದ ಅವರನ್ನು ಪ್ರತ್ಯೇಕವಾಗಿಡಲಾಗಿತ್ತು, ಇದೀಗ ನಿನ್ನೆ ಅವರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. 


ಸದ್ಯ ಸೊನಾಮ್ ನುರ್ಬೂ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸೋದರಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಹ ಅದೇ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರುವಂತೆ ನಿರ್ಬಂಧ ವಿಧಿಸಲಾಗಿದೆ. ಇದೀಗ ಒಬ್ಬ ಯೋಧನಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಅಲ್ಲಿ ಸೇವೆಯಲ್ಲಿರುವ ಇತರರಲ್ಲಿ ಆತಂಕ ಹುಟ್ಟಿಸಿದೆ.

ಈ ಮೂಲಕ ಭಾರತದಲ್ಲಿ ಇದುವರೆಗೆ ಕೊರೋನಾ ಪೀಡಿತರ ಸಂಖ್ಯೆ 140ಕ್ಕೇರಿದೆ.

SCROLL FOR NEXT