ದೇಶ

ಜಮ್ಮು-ಕಾಶ್ಮೀರ: ಏಳು ತಿಂಗಳ ಹಸುಗೂಸು, 8 ವರ್ಷದ ಬಾಲಕನಿಗೆ ಕೊರೋನಾ ಪಾಸಿಟಿವ್! 

Nagaraja AB

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಏಳು ತಿಂಗಳ ಹಸುಗೂಸು ಹಾಗೂ ಎಂಟು ವರ್ಷದ ಬಾಲಕನೋರ್ವನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ತಗುಲಿದ ಮಕ್ಕಳು ಶ್ರೀನಗರದ ನಾಟಿಪೋರಾ ಪ್ರದೇಶದ ಹಿರಿಯ ವ್ಯಕ್ತಿಯೊಬ್ಬರ ಮೊಮಕ್ಕಳಾಗಿದ್ದಾರೆ. ಉಮ್ರಾ ಆಚರಣೆ ಬಳಿಕ ಮಾರ್ಚ್ 16 ರಂದು ಇವರು ಸೌದಿ ಅರಬಿಯಾದಿಂದ ಹಿಂತಿರುಗಿದ್ದರು. ಮಾರ್ಚ್ 24 ರಂದು ತಪಾಸಣೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಕಂಡುಬಂದಿದೆ.

ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಶ್ರೀನಗರದ ಎದೆರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಆತನ ಪತ್ನಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ಸೇರಿದಂತೆ  14 ಕುಟುಂಬ ಸದಸ್ಯರನ್ನು ಜೆಎಲ್ ಎನ್ ಎಂ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. 

ಮಕ್ಕಳನ್ನು ಐಸೋಲೇಷನ್ ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ.ಇಬ್ಬರು ಮಕ್ಕಳ ಪರೀಕ್ಷಾ ವರದಿ ಗುರುವಾರ ಬಂದಿದ್ದು, ಇತರರ ವರದಿಗಾಗಿ ಕಾಯಲಾಗುತ್ತಿದೆ ಎಂದು ಜೆಎಲ್ ಎನ್ ಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಜಾಕೀರ್ ಹುಸೇನ್ ತಿಳಿಸಿದ್ದಾರೆ.

ಕುಟುಂಬದ ಸದಸ್ಯರಲ್ಲಿ ಈ ವೈರಸ್ ನ ಯಾವುದೇ ಲಕ್ಷಣ ಕಂಡುಬರದಿದ್ದರೂ ಇನ್ನೇರಡು ಪಾಸಿಟಿವ್ ಪ್ರಕರಣ ಗುರುವಾರ ಕಂಡುಬಂದಿದೆ. ಇದರೊಂದಿಗೆ ಜಮ್ಮು- ಕಾಶ್ಮೀರದಲ್ಲಿ ಈ ಸೋಂಕು ತಗುಲಿದವರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ. 13 ಸೋಂಕಿತರ ಪೈಕಿ 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ 

SCROLL FOR NEXT