ದೇಶ

ಕೊರೋನಾ ಮರಣ ಮೃದಂಗಕ್ಕೆ ದೇಶದಲ್ಲಿ ಮತ್ತೆ 7 ಸಾವು, ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಸೋಂಕಿತರ ಸಂಖ್ಯೆ 749

Srinivasamurthy VN

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಂತೆಯೇ ಭಾರತದಲ್ಲಿ ಸೋಂಕಿತರ ಸಂಖ್ಯೆ 749ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಕೊರೋನಾ ಹಾವಳಿ ಆರಂಭವಾದ ದಿನದಿಂದ ಇದೇ ಮೊದಲ ಬಾರಿಗೆ ಗರಿಷ್ಠ ಅಂದರೆ ಒಂದೇ ದಿನ 7 ಸಾವು ಸಂಭವಿಸಿದ್ದು, ಆ ಮೂಲಕ ಕೊರೋನಾ ವೈರಸ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಂತೆಯೇ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಕೂಡ 749ಕ್ಕೆ ಏರಿಕೆಯಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಈ ಕುರಿತಂತೆ ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಶುಕ್ರವಾರ ಬೆಳಿಗ್ಗೆ ಸೋಂಕು ಪೀಡಿತರ ಸಂಖ್ಯೆ 749ಕ್ಕೆ ಏರಿಕೆಯಾಗಿದ್ದು, ತೆಲಂಗಾಣ ಮತ್ತು ಒಡಿಶಾಗಳಲ್ಲಿ ಶುಕ್ರವಾರ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಒಡಿಶಾದ ಭುವನೇಶ್ವರದಲ್ಲಿ 60 ವರ್ಷ ವಯಸ್ಸಿನ ವೃದ್ಧರೊಬ್ಬರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ತೆಲಂಗಾಣದ 45 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 45 ಆಗಿದೆ.

ಈ ಮಧ್ಯೆ, ಮಹಾರಾಷ್ಟ್ರದ ಪುಣೆ ಬಳಿಯ ಪಿಂಪ್ರಿ–ಚಿಂಚ್‌ವಾಡ್‌ನಲ್ಲಿ ಕೊರೊನಾ ಶಂಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರಿಗೆ ಸೋಂಕು ತಗುಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಪುಣೆಯಲ್ಲಿ 32 ಜನರಲ್ಲಿ ಕೊರೊನಾ ದೃಢಪಟ್ಟಿದ್ದು, ಆ ಪೈಕಿ 5 ಮಂದಿ ಗುಣಮುಖರಾಗಿ  ಬಿಡುಗಡೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾದಿಂದಾಗಿ ಈವರೆಗೆ 5 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಸೋಂಕು ಪ್ರಕರಣಗಳ ಏರಿಕೆ ದರ ಸ್ಥಿರವಾಗಿದೆ. ದೇಶದಲ್ಲಿ ಸೋಂಕು ಈಗಲೂ ಎರಡನೇ ಹಂತದಲ್ಲಿಯೇ ಇದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

SCROLL FOR NEXT