ದೇಶ

ಲಾಕ್ ಡೌನ್ ಪರಿಣಾಮ ಡಾಟಾ ಬಳಕೆ, ಬೇಡಿಕೆ ದುಪ್ಪಟ್ಟು, ಹೆಚ್ಚುವರಿ ಸ್ಪೆಕ್ಟ್ರಂಗಾಗಿ ಟೆಲಿಕಾಂ ಇಲಾಖೆಗೆ ಮನವಿ!

Srinivas Rao BV

ನವದೆಹಲಿ: ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಿಸಿ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಕಲ್ಪಿಸಿರುವುದು ಡಾಟಾ ಬಳಕೆ ದುಪ್ಪಟ್ಟಾಗುವಂತೆ ಮಾಡಿದೆ. ಡಾಟಾ ಬಳಕೆಯ ಬೇಡಿಕೆ ಸರಿದೂಗಿಸಲು ಟೆಲಿಕಾಂ ಸಂಸ್ಥೆಗಳು ಹೆಚ್ಚುವರಿ ಸ್ಪೆಕ್ಟ್ರಂ (ತರಂಗಾಂತರ) ನೀಡುವಂತೆ ಟೆಲಿಕಾಂ ಇಲಾಖೆ ಮೊರೆ ಹೋಗಿವೆ. 

ಮನವಿ ಬಂದಿರುವ ಹಿನ್ನೆಲೆಯಲ್ಲಿ ಅವಶ್ಯಕತೆ ಇರುವ ಪ್ರಮಾಣದ ಸ್ಪೆಕ್ಟ್ರಂ ವಿವರಗಳನ್ನು ನಿಸ್ತಂತು ಸಂಪರ್ಕ ವಿಭಾಗಕ್ಕೆ ನೀಡುವಂತೆ ಟೆಲಿಕಾಂ ಇಲಾಖೆ ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಿದ್ದು, ವಿವರಗಳ ಸಲ್ಲಿಕೆಯಾದ ನಂತರ ಹೆಚ್ಚುವರಿ ಸ್ಪೆಕ್ಟ್ರಂ ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಿಟಿಐ ವರದಿ ಮಾಡಿದೆ. 

ವೊಡಾಫೋನ್ ಐಡಿಯಾ ಡಾಟಾ ಬಳಕೆ ಬಗ್ಗೆ ಗಮನವಿಟ್ಟಿದ್ದು, ಲಾಕ್ ಡೌನ್ ಆದಾಗಿನಿಂದಲೂ ವಾಯ್ಸ್ ಕರೆ ಹಾಗೂ ಡಾಟಾ ಸೇವೆಗಳು ಎಂದಿಗಿಂತ ಹೆಚ್ಚಾಗಿ ಬಳಕೆಯಾಗುತ್ತಿವೆ ಎಂದು ಹೇಳಿದೆ. 

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ನ ಪ್ರಧಾನ ನಿರ್ದೇಶ ರಾಜನ್ ಎಸ್ ಮ್ಯಾಥ್ಯೂಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಕಲ್ಪಿಸಿರುವುದರಿಂದ ಡಾಟಾ ಬಳಕೆಗೆ ಎಂದಿಗಿಂತಲೂ ಹೆಚ್ಚಿನ ಬೇಡಿಕೆ ಬಂದಿದೆ. ಈ ದಟ್ಟಣೆಯನ್ನು ನಿಭಾಯಿಸುವುದಕ್ಕಾಗಿ ಸೀಲ್ಡ್ ಮೊಬೈಲ್ ಟವರ್ ಗಳನ್ನು ಬಳಕೆ ಮಾಡುವುದಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಲಾಕ್ ಡೌನ್ ಆದಾಗಿನಿಂದಲೂ ಟೆಲಿಕಾಂ ಆಪರೇಟರ್ ಗಳು ಶೇ.100 ರಷ್ಟು ಡಾಟಾ ಬೇಡಿಕೆಯನ್ನು ಗಮನಿಸಿದ್ದಾರೆ. ಮೊಬೈಲ್ ಬಳಕೆದಾರರು ಡಾಟಾ ನೆಟ್ವರ್ಕ್ ನ್ನು ಜವಾಬ್ದಾರಿಯುತವಾಗಿ ಬಳಸಬೇಕು ಇದರಿಂದ ತುರ್ತು ಅಗತ್ಯ ಸೇವೆಗಳು ಸುಗಮವಾಗಿ ಕಾರ್ಯನಿರ್ವಹಿಸುವುದಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂದು ಸಿಒಎಐ ಮನವಿ ಮಾಡಿದೆ.

SCROLL FOR NEXT