ದೇಶ

ಆರ್‌ಬಿಐನಿಂದ ಬಡ್ಡಿ ದರಗಳ ಕಡಿತ: ಮೂರು ತಿಂಗಳು ಎಲ್ಲ ಸಾಲಗಳ ಇಎಂಐ ಮುಂದೂಡಿಕೆಗೆ ಅವಕಾಶ

Nagaraja AB

ಮುಂಬೈ: ಕೊರೋನಾವೈರಸ್ ಕಾರಣ ಇಡೀ ದೇಶ ಲಾಕ್ ಡೌನ್ ಆಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ಜನಸಾಮಾನ್ಯರಿಗೆ ಸ್ವಲ್ಪ ಅನುಕೂಲವಾಗುವ  ನಿಟ್ಟಿನಲ್ಲಿ ಆರ್ ಬಿಐ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.

 ರಾಷ್ಟ್ರೀಕೃತ, ವಾಣಿಜ್ಯ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿನ ಎಲ್ಲಾ ಸಾಲಗಳ  ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದು, ಮೂರು ತಿಂಗಳ ಇಎಂಐಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಆರ್ ಬಿಐ ಗೌರ್ವನರ್ ಶಕ್ತಿಕಾಂತ ದಾಸ್  ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. 

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಕ್ತಿಕಾಂತ ದಾಸ್, ವೈಯಕ್ತಿಕ, ಗೃಹ, ವಾಹನ ಸಾಲ, ಗೋಲ್ಡ್ ಲೋನ್, ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಸೇರಿದಂತೆ ಎಲ್ಲಾ  ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಇಎಂಐಯನ್ನು ಜೂನ್ ವರೆಗೂ ಮುಂದೂಡಿಕೆ ಮಾಡಲಾಗಿದೆ ಎಂದರು. ಕೊರೋನಾವೈರಸ್ ನಿಂದಾಗಿ ದೇಶದ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಉಂಟಾಗಿದ್ದು, ಪ್ರಸ್ತುತದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕೋವಿದ್ -19 ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತವನ್ನು ತಡೆಯುವ ಪ್ರಯತ್ನವಾಗಿ ರಿಸರ್ವ್ ಬ್ಯಾಂಕ್‍(ಆರ್‌ಬಿಐ) ಶುಕ್ರವಾರ ಪ್ರಮುಖ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ರೆಪೊ ದರವನ್ನು 75 ಮೂಲಾಂಕಗಳಷ್ಟು (ಶೇ0.75) ಹಾಗೂ ರಿವರ್ಸ್ ರೆಪೊ ದರವನ್ನು 100 ಮೂಲಾಂಕಗಳಷ್ಟು( ಶೇ 1 ರಷ್ಟು) ಇಳಿಸಿದೆ

ಸದ್ಯ,ರೆಪೊ ದರ (ಬ್ಯಾಂಕ್‍ಗಳಿಗೆ ರಿಸರ್ವ್ ಬ್ಯಾಂಕ್‍ ನೀಡುವ ಸಾಲದ ಮೇಲಿನ ಬಡ್ಡಿದರ) ಶೇ 4.4ರಷ್ಟು ಮತ್ತು ರಿವರ್ಸ್ ರೆಪೊ ದರ( ಬ್ಯಾಂಕ್‍ಗಳು ರಿಸರ್ವ್ ಬ್ಯಾಂಕ್‍ನಲ್ಲಿ ಇಡಬೇಕಾಗಿರುವ ಹಣದ ಮೇಲಿನ ಬಡ್ಡಿದರ) ಶೇ 4.15 ರಷ್ಟಿದೆ. ವಿಶ್ವ ಬಹುದೊಡ್ಡ ಆರ್ಥಿಕ ಹಿಂಜರಿತ ಎದುರಿಸುವ ನಿರೀಕ್ಷೆ ಎಂದು ಹೇಳಿರುವ ಶಕ್ತಿಕಾಂತ್ ದಾಸ್, ಭಾರತದ ಮೇಲೂ ಇದರ ಪರಿಣಾಮ ಬೀರಲಿದೆ.ಈ ಹಿನ್ನೆಲೆಯಲ್ಲಿ ಭಾರತ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT