ದೇಶ

ಕೊರೋನ ವೈರಸ್‍ ಹರಡುವಿಕೆ 3ನೇ ಹಂತಕ್ಕೆ ಕಾಲಿಡುತ್ತಿದೆ, ಹೆಚ್ಚಿನ ಪರೀಕ್ಷೆಗಳು ಅಗತ್ಯ: ಕಾಂಗ್ರೆಸ್‍

Srinivasamurthy VN

ನವದೆಹಲಿ: ಕೊರೊನಾವೈರಸ್‍ನ ದೃಢಪಟ್ಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶವು ಮೂರನೇ ಹಂತದತ್ತ ಸಾಗುತ್ತಿದ್ದು, ಸಾಧ್ಯವಾದಷ್ಟು ಹೆಚ್ಚು ಪರೀಕ್ಷೆಗಳನ್ನು ನಡೆಸುವುದರಿಂದ ಇದನ್ನು ಪರಿಣಾಮಕಾರಿಯಾಗಿ ಎದುರಿಸ ಬಹುದು ಎಂದು ಕಾಂಗ್ರೆಸ್ ಹೇಳಿದೆ.

ಕೊರೋನವೈರಸ್ ಮಾದರಿಗಳ ಪರೀಕ್ಷೆಗಳಲ್ಲಿ ಭಾರತ ಹಿಂದುಳಿದಿದೆ. ಭಾರತದಲ್ಲಿ ಪರೀಕ್ಷೆ ಅನುಪಾತ 10 ಲಕ್ಷ ಜನರಿಗೆ 32 ರಷ್ಟಿದೆ. ಆದರೆ, ಯುನೈಟೆಡ್‍ ಕಿಂಗ್‍ಡಮ್‍ನಲ್ಲಿ ಇದು 10 ಲಕ್ಷ ಜನರಿಗೆ 921, ಅಮೆರಿಕದಲ್ಲಿ 10 ಲಕ್ಷ ಜನರಿಗೆ 2,600ರಷ್ಟಿದೆ ಎಂದು ಹಿರಿಯ ಕಾಂಗ್ರೆಸ್  ಮುಖಂಡ ಮತ್ತು ಪಕ್ಷದ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸಲಹೆ-ಸೂಚನೆಯನ್ನು ನೀಡಿದ್ದು, ಹೆಚ್ಚಿನ ಪರೀಕ್ಷೆಗಳನ್ನು ನಡೆಸುವ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದೆ. ಕೊವಿದ್‍-19 ಹರಡುವಿಕೆ ತಡೆಗೆ ಹೆಚ್ಚಿನ ಪರೀಕ್ಷೆಗಳೊಂದೇ ಪರಿಣಾಮಕಾರಿ ಮಾರ್ಗವಾಗಿದೆ  ಎಂದು ಅವರು ಹೇಳಿದ್ದಾರೆ. ರಾಜ್ಯಗಳಲ್ಲಿ ಸಾಕಷ್ಟು ಪರೀಕ್ಷಾ ಕಿಟ್‌ಗಳಿಲ್ಲ. ಪರೀಕ್ಷಾ ಕಿಟ್‌ಗಳನ್ನು ತಯಾರಿಸಲು 17 ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಆದರೆ, ಕೇವಲ ನಾಲ್ಕು ಕಂಪೆನಿಗಳಿಗೆ ಅನುಮತಿ ನೀಡಲಾಗಿದೆ. ಎಫ್‍ಡಿಎ ಮತ್ತು ಐರೋಪ್ಯ ಒಕ್ಕೂಟದ ಅನುಮೋದನೆ ಪಡೆಯಲು  ಸರ್ಕಾರ ಉಳಿದ ಕಂಪೆನಿಗಳಿಗೆ ಸೂಚಿಸಿದೆ ಎಂದು ತಿವಾರಿ ಹೇಳಿದ್ದಾರೆ. 

ಸದ್ಯದ ಸನ್ನಿವೇಶದಲ್ಲಿ ಎಫ್‌ಡಿಎ ಅಥವಾ ಐರೋಪ್ಯ ಒಕ್ಕೂಟದ ಅನುಮೋದನೆ ಪಡೆಯುವುದು ಸುಲಭವಲ್ಲವಾದ್ದರಿಂದ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳದೆ ಗರಿಷ್ಠ ಸಂಖ್ಯೆಯ ಪರೀಕ್ಷಾ ಕಿಟ್‌ಗಳನ್ನು ಖರೀದಿಸಬೇಕಾಗಿದೆ. ಇದು ದೇಶಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ  ಅವರು ಮನವಿ ಮಾಡಿದ್ದಾರೆ. ಪ್ರಮುಖ ನಗರಗಳಿಂದ ವಲಸೆ ಹೋಗುತ್ತಿರುವ ಕಾರ್ಮಿಕರ ವಲಸೆಯ ಬಗ್ಗೆ ಪ್ರಸ್ತಾಪಿಸಿದ ಅವರು, ವಲಸೆ ಹೋಗುತ್ತಿರುವವರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡಬೇಕು. ಬೀದಿಗಳಲ್ಲಿರುವವರು, ಮನೆಗೆ ಹೋಗಲು ಹತಾಶ ಪ್ರಯತ್ನ ನಡೆಸುತ್ತಿರುವವರನ್ನು  ಸುರಕ್ಷಿತವಾಗಿ ಮನೆ ತಲುಪಿಸಲು ಸಹಾಯ ಮಾಡುವಂತೆ ತಿವಾರಿ ಸರ್ಕಾರವನ್ನು ಕೋರಿದ್ದಾರೆ. ಭಾರತದಲ್ಲಿ ಹೊಸ 227 ಹೊಸ ಪ್ರಕರಣಗಳೊಂದಿಗೆ ಕೊವಿದ್-19 ಸೋಂಕಿನ ಪ್ರಕರಣಗಳ ಸಂಖ್ಯೆ 1,251 ಕ್ಕೆ ತಲುಪಿದೆ.

SCROLL FOR NEXT