ದೇಶ

ಭಾರತದಲ್ಲೇ ಮೊದಲು: ಮಹಾರಾಷ್ಟ್ರದ ಎಲ್ಲಾ ನಾಗರಿಕರಿಗೆ ಉಚಿತ ಆರೋಗ್ಯ ರಕ್ಷಣೆ ಯೋಜನೆ ಜಾರಿ

Raghavendra Adiga

ಜಲ್ನಾ: ಮಹಾರಾಷ್ಟ್ರದ ಪ್ರತಿಯೊಬ್ಬ ನಾಗರಿಕರಿಗೆ ರಾಜ್ಯ ಸರ್ಕಾರದ ಆರೋಗ್ಯ ಯೋಜನೆಯನ್ನು ವಿಸ್ತರಿಸುವುದಾಗಿ  ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಘೋಷಿಸಿದ್ದಾರೆ. ಈ ಕ್ರಮದೊಂದಿಗೆ ಮಹಾರಾಷ್ಟ್ರವು ತನ್ನ ಜನರಿಗೆ ಉಚಿತ ಮತ್ತು ನಗದುರಹಿತ ವಿಮಾ ರಕ್ಷಣೆಯನ್ನು ನೀಡಿದ ದೇಶದ ಮೊದಲ ರಾಜ್ಯವಾಗಿದೆ.

ಶುಕ್ರವಾರ ಜಲ್ನಾದಲ್ಲಿ ನಡೆದ ಮಹಾರಾಷ್ಟ್ರ ದಿನಾಚರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟೋಪೆ, ರಾಜ್ಯದ ಜನಸಂಖ್ಯೆಯ ಶೇಕಡಾ 85 ರಷ್ಟು ಜನರು ಪ್ರಸ್ತುತ ಮಹಾತ್ಮ ಜ್ಯೋತಿಬಾ ಫುಲೆ ಜಾನ್ ಆರೋಗ್ಯ ಯೋಜನೆ (ಎಂಜೆಪಿಜೆಎ) ವ್ಯಾಪ್ತಿಗೆ ಒಳಪಟ್ಟಿದ್ದಾರೆ ಈ ವಿಮಾ ರಕ್ಷಣೆಯನ್ನು ಉಳಿದಿರುವ  ಶೇ 15 ರಷ್ಟು ಜನರಿಗೆ ಸಹ ವಿಸ್ತರಿಸಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುವುದನ್ನು ತಡೆಯುವ ಉದ್ದೇಶದಿಂದ ಈ ಯೋಜನೆಯಲ್ಲಿ ಸರ್ಕಾರಿ, ಅರೆ ಸರ್ಕಾರಿ ನೌಕರರು ಮತ್ತು ವೈಟ್ ರೇಷನ್ ಕಾರ್ಡ್ ಹೊಂದಿರುವವರನ್ನು ಸೇರಿಸಲು ಮೆಮೋಗೆ  ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು.

"ಪುಣೆ ಮತ್ತು ಮುಂಬೈನ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್  ರೋಗಿಗಳ ಚಿಕಿತ್ಸೆಗಾಗಿ ಸರ್ಕಾರ ಸಾಮಾನ್ಯ ವಿಮಾ ಸಾರ್ವಜನಿಕ ವಲಯ ಸಂಘ (ಜಿಪ್ಸಾ) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ" ಎಂದು ಅವರು ಹೇಳಿದರು.

ಅಂತೆಯೇ, ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಶುಲ್ಕವನ್ನು ಪ್ರಮಾಣೀಕರಿಸಲು ಎಲ್ಲಾ ರೋಗಗಳಿಗೆ ವಿಭಿನ್ನ ಪ್ಯಾಕೇಜ್‌ ರಚಿಸಲಾಗುತ್ತದೆ.ಈ ಹಿಂದೆ 496 ಆಸ್ಪತ್ರೆಗಳನ್ನು ಈ ಯೋಜನೆಯಡಿ ಸೇರಿಸಲಾಗಿತ್ತು. ಈಗ 1,000 ಕ್ಕೂ ಹೆಚ್ಚು ಆಸ್ಪತ್ರೆಗಳು ಇದರ ವ್ಯಾಪ್ತಿಗೆ ಬರುತ್ತವೆ ಎಂದು ಅವರು ಹೇಳಿದರು.

ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ  ರೋಗ ತಡೆ ಕಾಯ್ದೆಯ ಪ್ರಕಾರ  ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಯ ಶುಲ್ಕವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ ಜಿಪ್ಸಾ ಜೊತೆ ಒಪ್ಪಂದ ಮಾಡಿಕೊಂಡ ಆಸ್ಪತ್ರೆಗಳು ತಮ್ಮ ಚಿಕಿತ್ಸಾ ಶುಲ್ಕವನ್ನು ಪ್ರಮಾಣೀಕರಿಸಬೇಕಾಗುತ್ತದೆ 

SCROLL FOR NEXT