ದೇಶ

ಉಗ್ರರ ಹುಟ್ಟಡಗಿಸುತ್ತಿದ್ದ ಹುತಾತ್ಮ ಸೇನಾಧಿಕಾರಿ ಆಶುತೋಷ್ ಶರ್ಮಾ 2 ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು!

Manjula VN

ನವದೆಹಲಿ: ಉಗ್ರರ ಹುಟ್ಟಡಗಿಸುವ ಕಾರ್ಯಾಚರಣೆ ವೇಳೆ ಸದಾಕಾಲ ಮುಂದಾಳತ್ವ ವಹಿಸುತ್ತಿದ್ದ ಹುತಾತ್ಮ ಸೇನಾಧಿಕಾರಿ ಆಶುತೋಷ್ ಶರ್ಮಾ ಅವರು 2 ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು. 

ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಐವರು ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. 

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಇಬ್ಬರು ಸೇನಾಧಿಕಾರಿಗಳ ಪೈಕಿ ಆಶುತೋಷ್ ಶರ್ಮಾ ಕೂಡ ಒಬ್ಬರಾಗಿದ್ದು, ಕಾರ್ಯಾಚರಣೆ ವೇಳೆ ಶರ್ಮಾ ಅವರು, ಉಗ್ರರ ಒತ್ತೆಯಾಳುಗಳಾಗಿದ್ದ ನಾಗರೀಕರನ್ನು ರಕ್ಷಿಸುವಲ್ಲಿ ಭದ್ರತಾಪಡೆಗಳನ್ನು ಮುನ್ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಕಾರ್ಯಾಚರಣೆ ವೇಳೆ ನಾಗರೀಕರನ್ನು ರಕ್ಷಣೆ ಮಾಡಿದ ಬಳಿಕ ಉಗ್ರರು ನಡೆಸಿದ ದಾಳಿಯಲ್ಲಿ ಶರ್ಮಾ ಅವರು ಹುತಾತ್ಮರಾಗಿದ್ದಾರೆ. 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಮಾಂಡಿಂಗ್ ಅಧಿಕಾರಿಯೊಬ್ಬರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. 

5 ವರ್ಷಗಳ ಹಿಂದೆ 2015ರಲ್ಲಿಯೂ ಕರ್ನಲ್ ಎಂ.ಎನ್.ರೈ ಅವರು ಕಾಶ್ಮೀರದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. ಅದೇ ವರ್ಷ ನವೆಂಬರ್ ನಲ್ಲಿ ಕರ್ನಲ್ ಸಂತೋಷ್ ಮಹಾದಿಕ್ ಅವರೂ ಕೂಡ ಹುತಾತ್ಮರಾಗಿದ್ದರು. 

ಆಶುತೋಷ್ ಶರ್ಮಾ ಅವರು 21ನೇ ರಾಷ್ಟ್ರೀಯ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಡಿಯಲ್ಲಿ ಒಳನುಸುಳುತ್ತಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹೀರೋ ಎನಿಸಿಕೊಂಡಿದ್ದರು. ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಉಗ್ರರು ನಡೆಸಿದ್ದ ದಾಳಿ ವೇಳೆ, ಉಗ್ರನೊಬ್ಬ ತನ್ನ ಬಟ್ಟೆಯಲ್ಲಿ ಗ್ರೆನೇಡ್ ತೊಟ್ಟು ಭದ್ರತಾಪಡೆಗಳಿದ್ದ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಉಗ್ರನಿಗೆ ಬಹಳ ಹತ್ತಿರದಿಂದಲೇ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದರಿಂದಾಗಿ ಸಾಕಷ್ಟು ಯೋಧರ ಜೀವ ಉಳಿದಂತಾಗಿದ್ದು, ಈ ಕಾರ್ಯಾಚರಣೆಯಲ್ಲಿ ಶರ್ಮಾ ಅವರ ಕೊಡುಗೆ ಮಹತ್ವದ್ದಾಗಿತ್ತು. ಈ ಘಟನೆ ಸೇರಿದಂತೆ ಶರ್ಮಾ ಅವರಿಗೆ ಎರಡು ಬಾರಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

SCROLL FOR NEXT