ದೇಶ

ಗುಜರಾತ್ ನಲ್ಲಿ ಕೊರೋನಾ ವೈರಸ್ ಹರಡಲು ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ: ಕಾಂಗ್ರೆಸ್

Lingaraj Badiger

ಅಹಮದಾಬಾದ್: ಗುಜರಾತ್ ನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಫೆಬ್ರವರಿ 24ರಂದು ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ ಎಂದು ಗುಜರಾತ್ ಕಾಂಗ್ರೆಸ್ ಬುಧವಾರ ಆರೋಪಿಸಿದೆ.

ರಾಜ್ಯ ಬಿಜೆಪಿ ಸರ್ಕಾರ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಮೂಲಕ ಸ್ವತಂತ್ರ ತನಿಖೆಯಾಗಬೇಕು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚವ್ದಾ ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಗುಜರಾತ್ ಹೈಕೋರ್ಟ್ ಮೆಟ್ಟಿಲೇರುವುದಾಗಿ ಅಮಿತ್ ಅವರು ತಿಳಿಸಿದ್ದಾರೆ.

ಜನವರಿಯಲ್ಲಿಯೇ, ಕೊರೋನಾ ವೈರಸ್ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ದೊಡ್ಡ ಸಭೆ, ಸಮಾರಂಭಗಳನ್ನು ಆಯೋಜಿಸುವುದನ್ನು ತಡೆಯುವಂತೆ ಎಲ್ಲ ದೇಶಗಳಿಗೂ ಸೂಚಿಸಿತ್ತು. ಅಂತಹ ಎಚ್ಚರಿಕೆಯ ಹೊರತಾಗಿಯೂ, 'ನಮಸ್ತೆ ಟ್ರಂಪ್' ಅನ್ನು ರಾಜಕೀಯ ಲಾಭಕ್ಕಾಗಿ ಯೋಜಿಸಲಾಗಿತ್ತು ಮತ್ತು ಗುಜರಾತ್ ಸರ್ಕಾರ ಅದಕ್ಕೆ ಅನುಮತಿಯನ್ನು ನೀಡಿತ್ತು" ಎಂದು ಅಮಿತ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಆರೋಪವನ್ನು ರಾಜ್ಯ ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದೊಂದು ಆಧಾರ ರಹಿತ ಆರೋಪ. ಕೊವಿಡ್-19 ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆ ಘೋಷಿಸುವ ಮುನ್ನವೇ ಈ ಕಾರ್ಯಕ್ರಮ ನಡೆದಿದೆ ಮತ್ತು ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆದು ಒಂದು ತಿಂಗಳ ನಂತರ ರಾಜ್ಯದಲ್ಲಿ ಕೊರೋನಾ ವೈರಸ್ ಪಾಸಿಟಿವ್ ವರದಿಯಾಗಿದೆ ಎಂದು ಹೇಳಿದೆ.

SCROLL FOR NEXT