ದೇಶ

ಈವರೆಗೂ 15 ಲಕ್ಷ ಕೋವಿಡ್-19 ಪರೀಕ್ಷೆ-ಕೇಂದ್ರ ಸಚಿವ ಹರ್ಷವರ್ಧನ್ 

Nagaraja AB

ನವದೆಹಲಿ: ಪ್ರತಿದಿನ ಸುಮಾರು 95 ಸಾವಿರ ಕೋವಿಡ್-19 ಪರೀಕ್ಷೆ ಸಾಮರ್ಥ್ಯವಿದ್ದು, 332 ಸರ್ಕಾರಿ ಹಾಗೂ 121 ಖಾಸಗಿ ಪ್ರಯೋಗಾಲಯಗಳಲ್ಲಿ ಈವರೆಗೂ 15 ಲಕ್ಷದ 25 ಸಾವಿರದ 631 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಕೋವಿಡ್-19 ತಡೆ ಹಾಗೂ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳೊಂದಿಗೆ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿದ ಸಚಿವರು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಹಾಗೂ ಧೂಮಪಾನ ನಿಷೇಧವನ್ನು ಒತ್ತಿ ಹೇಳಿದರು. ಇದರಿಂದಾಗಿ ಸೋಂಕು ಹರಡುವುದನ್ನು ತಪ್ಪಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ. 

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮೀಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ರಾಜ್ಯಗಳ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ  ಕೋವಿಡ್- 19 ನಿಯಂತ್ರಣದಲ್ಲಿ ಆ ರಾಜ್ಯಗಳ ಬದ್ಧತೆಯನ್ನು ಶ್ಲಾಘಿಸಿದರು.

ಅಸ್ಸಾಂ ಹಾಗೂ ತ್ರಿಪುರಾದಲ್ಲಿ  ಹೆಚ್ಚಿನ ಕೋವಿಡ್-19 ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದ ಈಶಾನ್ಯ ರಾಜ್ಯಗಳು ಹಸಿರು ವಲಯದಲ್ಲಿವೆ. ಹಳದಿ ವಲಯವನ್ನು ಹಸಿರು ವಲಯವನ್ನಾಗಿ ಪರಿವರ್ತಿಸುವ ಕಡೆಗೆ ಇದೀಗ ಗಮನ ನೀಡಬೇಕಾಗಿದೆ. ಈ ಎಲ್ಲಾ ರಾಜ್ಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಹರ್ಷವರ್ಧನ್ ಹೇಳಿದ್ದಾರೆ. 

ಸಂವಾದ ವೇಳೆ, ಪರೀಕ್ಷಾ ಸೌಕರ್ಯಗಳು, ಆರೋಗ್ಯ ಮೂಲಸೌಕರ್ಯಗಳು, ನಿಗಾವಣೆ, ಕೋವಿಡ್-19 ಸೋಂಕು ಪತ್ತೆ ಮತ್ತಿತರ ವಿಚಾರಗಳನ್ನು ರಾಜ್ಯಗಳು ಹೈಲೈಟ್ ಮಾಡಿದ್ದು, ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದಾಗಿ ಹರ್ಷವರ್ಧನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಬೆಳಗಿನ ವರೆಗಿನ ಮಾಹಿತಿಯಂತೆ ತ್ರಿಪುರಾದಲ್ಲಿ 118, ಅಸ್ಸಾಂನಲ್ಲಿ 59, ಮೇಘಾಲಯದಲ್ಲಿ 12, ಮಣಿಪುರದಲ್ಲಿ 2, ಮೀಜೂರಾಂ ಹಾಗೂ ಅರುಣಾಚಲ ಪ್ರದೇಶದಲ್ಲಿ  ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಮೇಘಾಲಯ ಮತ್ತು ಅಸ್ಸಾಂನಲ್ಲಿ ತಲಾ ಒಂದು ಸಾವಿನ ಪ್ರಕರಣಗಳು ವರದಿಯಾಗಿವೆ.

SCROLL FOR NEXT