ದೇಶ

ಭಾರತೀಯ ಸೇನೆಯಿಂದ 'ಟೂರ್ ಆಫ್ ಡ್ಯೂಟಿ' ಪ್ರಸ್ತಾವನೆ: ಪ್ರತಿಭಾವಂತ ಯುವ ಜನತೆಗೆ ದೇಶ ಸೇವೆ ಮಾಡುವ ಅವಕಾಶ!

Sumana Upadhyaya

ನವದೆಹಲಿ: ದೇಶದ ಯುವ ಸದೃಢ ಕಾರ್ಯಕರ್ತರಿಗೆ ಭಾರತೀಯ ಸೇನೆಗೆ ಸೇರಿ ಮೂರು ವರ್ಷಗಳ ಕಾಲ ದೇಶಸೇವೆ ಮಾಡುವ ಅವಕಾಶ ಸಿಗಲಿದೆ. ಟೂರ್ ಆಫ್ ಡ್ಯೂಟಿ(Tour of Duty) ಎಂಬ ಪರಿಕಲ್ಪನೆಯಡಿ ಭಾರತೀಯ ಸೇನೆ ಪ್ರಸ್ತಾವನೆ ಸಲ್ಲಿಸಿದ್ದು ಇದು ಅನುಮೋದನೆ ಹಂತದಲ್ಲಿದೆ.

ಇದು ಯುವಕ ಮತ್ತು ಯುವತಿಯರಿಗೆ ಇಬ್ಬರಿಗೂ ಅವಕಾಶ ಕಲ್ಪಿಸಲಿದೆ. ದೇಶದಲ್ಲಿರುವ ಉತ್ತಮ ಪ್ರತಿಭಾವಂತ ಯುವಕ-ಯುವತಿಯರನ್ನು ಸೇನೆಗೆ ಸೇರಿಸಿಕೊಳ್ಳಲಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿದ ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕರ್ನಲ್ ಅಮನ್ ಆನಂದ್, ಉನ್ನತ ಮಟ್ಟದಲ್ಲಿ ಟೂರ್ ಆಫ್ ಡ್ಯೂಟಿ ಪ್ರಸ್ತಾವನೆ ಮಾತುಕತೆ ಹಂತದಲ್ಲಿದ್ದು ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಇಲ್ಲಿ ಆಯ್ಕೆಯಾದ ಯುವಕ-ಯುವತಿಯರಿಗೆ ಆಯ್ಕೆ, ತರಬೇತಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಕರ್ನಲ್ ಆನಂದ್ ತಿಳಿಸಿದ್ದಾರೆ.

ಸೇನೆಯಲ್ಲಿ ಶಾಶ್ವತ ಸೇವೆ/ಉದ್ಯೋಗಕ್ಕೆ ಬದಲಿಯಾಗಿ ಮೂರು ವರ್ಷಗಳವರೆಗೆ ತರಬೇತಿ/ತಾತ್ಕಾಲಿಕ ಅನುಭವವನ್ನು ಪರಿಗಣಿಸಲಾಗುತ್ತದೆ.ಯುವಕರಿಗೆ ನಿರುದ್ಯೋಗ ಸಮಸ್ಯೆಯನ್ನು ಇದು ನಿವಾರಿಸಲಿದ್ದು ಅವರಲ್ಲಿ ರಾಷ್ಟ್ರೀಯತೆ, ದೇಶಭಕ್ತಿಯನ್ನು ಹೆಚ್ಚಿಸಲಿದೆ. ಇದು ಭಾರತೀಯ ಸೇನೆಯಲ್ಲಿ ಅಧಿಕಾರಿ ಮತ್ತು ಇತರ ರ್ಯಾಂಕ್ ಹುದ್ದೆಗಳಿಗೆ ಅನ್ವಯವಾಗಲಿದೆ. ಆರಂಭದಲ್ಲಿ ಸೀಮಿತ ಸಂಖ್ಯೆಯ ಹುದ್ದೆಗಳಿದ್ದು ಅದು ಯಶಸ್ವಿಯಾದರೆ ಮುಂದೆ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದರು.
ಇಸ್ರೇಲ್ ದೇಶದ ರಕ್ಷಣಾ ಪಡೆಯಲ್ಲಿ ಈ ರೀತಿಯ ನೇಮಕಾತಿ ಪ್ರಕ್ರಿಯೆಯಿದ್ದು ಭಾರತ ಕೂಡ ಅದೇ ವಿಧಾನ ಅಳವಡಿಸಿಕೊಳ್ಳಲು ನೋಡುತ್ತಿದೆ.

ನಿಯಮ ಹೇಗೆ: ಟೂರ್ ಆಫ್ ಡ್ಯೂಟಿ ಅಡಿಯಲ್ಲಿ ಆಯ್ಕೆಯಾದ ಯುವಕರು ಒಂದು ವರ್ಷ ತರಬೇತಿ ಮತ್ತು ಮೂರು ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಲಿದ್ದಾರೆ. ಸೇನೆಯಲ್ಲಿ ಕಠಿಣ ತರಬೇತಿ, ಶಿಸ್ತು, ಸಂಯಮ, ವಿಶ್ವಾಸ, ತಾಳ್ಮೆ, ಬದ್ಧತೆ ಇವೆಲ್ಲವುಗಳನ್ನು ಕಲಿಸುವುದರಿಂದ ಯುವಕ-ಯುವತಿಯರಿಗೆ ಮುಂದಿನ ದಿನಗಳಲ್ಲಿ ಅವರ ಜೀವನಕ್ಕೆ ಸಹಾಯವಾಗಲಿದೆ.
ಈ ಅವಧಿಯಲ್ಲಿ ಸೇವೆಯಲ್ಲಿರುವಾಗ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ನೆರವು ಮತ್ತು ಉದ್ಯೋಗ ಸಿಗುತ್ತದೆ.

SCROLL FOR NEXT