ದೇಶ

1 ಕೋಟಿ ದಾಟಿದ ಆಯುಷ್ಮಾನ್ ಫಲಾನುಭವಿಗಳ ಸಂಖ್ಯೆ: ಮೇಘಾಲಯ ಯೋಧನ ಪತ್ನಿ ಜೊತೆ ಮಾತನಾಡಿದ ಪ್ರಧಾನಿ

Sumana Upadhyaya

ನವದೆಹಲಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಸಂಖ್ಯೆ 1 ಕೋಟಿ ದಾಟಿದ್ದು ಈ ಅಭಿಯಾನ ಹಲವು ಜನರಿಗೆ ಉಪಯೋಗವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

2018ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ಮಂತ್ರಿ ಜನ ಆರೋಗ್ಯ ಯೋಜನೆ-ಆಯುಷ್ಮಾನ್ ಭಾರತ್ ಯೋಜನೆಯನ್ನು ಆರಂಭಿಸಲಾಗಿತ್ತು. ಜಗತ್ತಿನಲ್ಲಿಯೇ ಸರ್ಕಾರದ ಅತಿದೊಡ್ಡ ಆರೋಗ್ಯ ಸೇವೆ ಯೋಜನೆ ಎಂದು ಬಣ್ಣಿಸಲಾಗುತ್ತಿದೆ.

ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿಗಳ ಸಂಖ್ಯೆ 1 ಕೋಟಿ ಗಡಿ ದಾಟಿದೆ ಎಂಬುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ವಿಷಯ. ಕೇವಲ ಎರಡೇ ವರ್ಷಗಳಲ್ಲಿ ಹಲವು ಜನರಿಗೆ ಈ ಯೋಜನೆಯಿಂದ ಉಪಯೋಗವಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಆಯುಷ್ಮಾನ್ ಭಾರತ್ ಜೊತೆ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಸೇವೆ ಕಾರ್ಯಕರ್ತರನ್ನು ಶ್ಲಾಘಿಸಿದರು. ಆರೋಗ್ಯ ಸೇವೆಯಲ್ಲಿ ಅವರ ಕೊಡುಗೆ ಅನನ್ಯ ಎಂದಿದ್ದಾರೆ.

ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ತಾವು ದಾಖಲಾತಿ ಮಾಡಿಕೊಂಡಿರುವ ಸ್ಥಳದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲಿ ಯಾವ ಭಾಗದಲ್ಲಿಯಾದರೂ ಸಿಗುತ್ತದೆ. ಮನೆಯಿಂದ ದೂರವುಳಿದು ಕೆಲಸ ಮಾಡುವವರಿಗೆ ಅಥವಾ ತಾವು ನೆಲೆಸದಿರುವ ಜಾಗದಲ್ಲಿ ದಾಖಲಾತಿ ಮಾಡಿಕೊಂಡವರಿಗೆ ಆರೋಗ್ಯ ಸೇವೆ ಸಿಗುತ್ತದೆ ಎಂದಿದ್ದಾರೆ.

ಸಾಮಾನ್ಯವಾಗಿ ತಮ್ಮ ಅಧಿಕೃತ ಪ್ರವಾಸದ ವೇಳೆ ಪ್ರಧಾನಿ ಆಯುಷ್ಮಾನ್ ಭಾರತ್ ಫಲಾನುಭವಿಗಳ ಜೊತೆ ಮಾತನಾಡುತ್ತಾರೆ. ಆದರೆ ಈ ಬಾರಿ ಕೊರೋನಾ ವೈರಸ್ ನಿಂದಾಗಿ ಪ್ರವಾಸ ಮಾಡಲು ಸಾಧ್ಯವಾಗುತ್ತಿಲ್ಲ. 1 ಕೋಟಿಯ ಫಲಾನುಭವಿ ಮೇಘಾಲಯದ ಪೂಜಾ ತಾಪಾ ಜೊತೆ ದೂರವಾಣಿ ಮೂಲಕ ಸಂವಾದ ನಡೆಸಿದರು. ಯೋಧನ ಪತ್ನಿ ಪೂಜಾ ತಾಪಾ ಜೊತೆ ನಡೆಸಿರುವ ಸಂವಾದದ ವಿಡಿಯೊವನ್ನು ಕೂಡ ಪ್ರಧಾನಿ ಹಂಚಿಕೊಂಡಿದ್ದಾರೆ.

SCROLL FOR NEXT