ದೇಶ

ಏರ್ ಇಂಡಿಯಾ, ಇತರೆ ವಿಮಾನಯಾನ ಕಂಪನಿಗಳ ಬುಕಿಂಗ್ ಆರಂಭ

Lingaraj Badiger

ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತು ಇತರ ವಿಮಾನಯಾನ ಸಂಸ್ಥೆಗಳ ದೇಶೀಯ ವಿಮಾನ ಹಾರಾಟ ಮೇ 25 ರಿಂದ ಆರಂಭವಾಗಲಿದ್ದು, ಇದಕ್ಕಾಗಿ ಶುಕ್ರವಾರದಿಂದಲೇ ಬುಕಿಂಗ್ ಪ್ರಾರಂಭಿಸಿವೆ.

ಏರ್ ಇಂಡಿಯಾ ಇಂದು ಮಧ್ಯಾಹ್ನ 12.30 ಕ್ಕೆ ಬುಕಿಂಗ್ ಪ್ರಾರಂಭಿಸಿದೆ. ಟಿಕೆಟ್‌ಗಳನ್ನು ನೇರವಾಗಿ ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌ನಿಂದ ಮತ್ತು ಅದರ ಅಧಿಕೃತ ಏಜೆಂಟರು ಅಥವಾ ಬುಕಿಂಗ್ ಕಚೇರಿಗಳಿಂದ ಕಾಯ್ದಿರಿಸಬಹುದು ಎಂದು ತಿಳಿಸಿದೆ.

ಖಾಸಗಿ ವಿಮಾನಯಾನ ಸಂಸ್ಥೆಗಳಾದ ವಿಸ್ಟಾರಾ ಕೂಡ ಪತ್ರಿಕಾ ಪ್ರಕಟಣೆಯಲ್ಲಿ ಬುಕಿಂಗ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಪ್ರಸ್ತುತ ವಿಮಾನಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಬೇಸಿಗೆ ವೇಳಾಪಟ್ಟಿಗೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ವಿಮಾನಗಳು ಕಾರ್ಯನಿರ್ವಹಿಸಲು ಸರ್ಕಾರ ಈಗಾಗಲೇ ಅನುಮತಿ ನೀಡಿದೆ.

ಕೈಗೆಟುಕುವ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ ಮತ್ತು ಸ್ಪೈಸ್‌ಜೆಟ್ ಸಹ ಬುಕಿಂಗ್ ಪ್ರಾರಂಭಿಸಿವೆ. ಕೊವಿಡ್ -19 ರ ದೃಷ್ಟಿಯಿಂದ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಮನವಿ ಮಾಡಿದೆ.

ಎರಡು ತಿಂಗಳ ಅಂತರದ ನಂತರ ಹಲವಾರು ಷರತ್ತುಗಳೊಂದಿಗೆ ಮೇ 25 ರಿಂದ ದೇಶೀಯ ವಿಮಾನಯಾನಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಕೊವಿಡ್ -19 ನಿಯಂತ್ರಿಸುವುದಕ್ಕಾಗಿ ಮಾರ್ಚ್ 25 ರಿಂದ ಎಲ್ಲಾ ದೇಶೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ, ವಿಮಾನದ ಸಮಯಕ್ಕೆ ಅನುಗುಣವಾಗಿ ಪ್ರತಿ ಮಾರ್ಗಕ್ಕೂ ಗರಿಷ್ಠ ಮತ್ತು ಕನಿಷ್ಠ ಶುಲ್ಕವನ್ನು ಸರ್ಕಾರ ನಿಗದಿಪಡಿಸಿದೆ.

SCROLL FOR NEXT