ದೇಶ

ಡಿಸೆಂಬರ್ ನಿಂದ ಬಡವರಿಗೆ ಉಚಿತ ಇಂಟರ್ ನೆಟ್..! ಎಲ್ಲಿ ಗೊತ್ತಾ?

Srinivasamurthy VN

ಕೊಚ್ಚಿನ್: ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಕೇರಳ ಇದೀಗ ಮತ್ತೊಂದು ಮೊದಲಿಗೆ ನಾಂದಿ ಹಾಡುತ್ತಿದ್ದು, ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಬಡವರಿಗೆ ಉಚಿತ ಇಂಟರ್ ನೆಟ್ ಕಲ್ಪಿಸುವ ಯೋಜನೆಯನ್ನು ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ.

ಹೌದು.. ಕೇರಳ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ (ಕೆ-ಫೋನ್) ಯೋಜನೆಯನ್ನು ಪ್ರಕಟಿಸಿದ್ದು, ಬಡವರಿಗೆ ಉಚಿತ ಇಂಟರ್ನೆಟ್ ಒದಗಿಸುವುದು ಇದರ ಉದ್ದೇಶವಾಗಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಇದನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಈ  ಬಗ್ಗೆ ಮಾಹಿತಿ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, 'ಅಂತರ್ಜಾಲ ನಾಗರಿಕ ಮೂಲಭೂತ ಹಕ್ಕು. ಹೀಗಾಗಿ ಕೆ-ಫೋನ್ ಯೋಜನೆಯನ್ನು ಬಡವರಿಗೆ ಉತ್ತಮ ಗುಣಮಟ್ಟದ ಅಂತರ್ಜಾಲ ಒದಗಿಸಲು ಮತ್ತು ರೈತರಿಗೆ ಕೈಗೆಟಗುವ ದರದಲ್ಲಿ ನೀಡಲು ನಿರ್ಧರಿಸಲಾಗಿದೆ.  ಭಾರತದ ಯಾವುದೇ ರಾಜ್ಯ ಇದುವರೆಗೂ ಇಂಥ ಯೋಜನೆಯನ್ನು ಜಾರಿಗೊಳಿಸಿಲ್ಲ. ಮೊದಲ ಬಾರಿಗೆ ಕೇರಳದಲ್ಲಿ ಈ ಯೋಜನೆಯನ್ನು ಜಾರಿಗೊಳ್ಳಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವಿಚಾರವಾಗಿ ಕನ್ಸೋರ್ಟಿಯಂ ಮುಖ್ಯಸ್ಥ ಬಿಇಎಲ್ ಸಿಎಂಡಿ ಎಂ.ವಿ.ಗೌತಮ್ ಅವರೊಂದಿಗೆ ತಾವು ಚರ್ಚಿಸಿದ್ದು, 1,500 ಕೋಟಿ ರೂ.ಗಳ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಕಂಪನಿಗಳ ಒಕ್ಕೂಟದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಬಡವರಿಗೆ ಉತ್ತಮ ಗುಣಮಟ್ಟದ  ಉಚಿತ ಇಂಟರ್ನೆಟ್ ಸೇವೆ ನೀಡಲಾಗುವುದು. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್‌ನಿಂದ ಈ ಯೋಜನೆಯ ಆರಂಭಕ್ಕೆ ವಿಳಂಬವಾಗಿದೆ. ಆದರೂ ಕೂಡ ಈ ವರ್ಷದ ಡಿಸೆಂಬರ್ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಅವರು ಭರವಸೆ  ನೀಡಿದ್ದಾರೆ. ಈ ಒಕ್ಕೂಟವು ಹಲವಾರು ಸಾರ್ವಜನಿಕ ವಲಯದ ಕಂಪನಿಗಳನ್ನು ಒಳಗೊಂಡಿದೆ. ಖಾಸಗಿ ಕಂಪನಿಗಳಾದ ಎಸ್‌ಆರ್‌ಐಟಿ ಮತ್ತು ಎಲ್‌ಎಸ್ ಕೇಬಲ್‌ಗಳ ಜೊತೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ರೈಲ್ಟೆಲ್ ಇದರಲ್ಲಿ ಸಹಭಾಗಿತ್ವ ಹೊಂದಿದೆ ಎಂದು ವಿಜಯನ್  ಮಾಹಿತಿ ನೀಡಿದರು. 

ಈ ಯೋಜನೆ ರಾಜ್ಯದ ಪಾಲಿಗೆ ಲಾಭಕಾರಿಯಾಗಲಿದ್ದು, ಸ್ಟೇಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಕೇರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್ ಗಳು ಕಾರ್ಯಾನ್ವಿತಗೊಳಿಸಿದ್ದು, ರಾಜ್ಯಾದ್ಯಂತ ಇರುವ KSEB ಪೋಸ್ಟ್ ಗಳನ್ನು ಬಳಸಿ ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಅಳವಡಿಸಲಾಗಿದೆ.  K-FON ನೆಟ್ವರ್ಕ್ ರಾಜ್ಯದ ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಕಛೇರಿಗಳು ಹಾಗೂ ಇತರೆ ಸಂಸ್ಥೆಗಳಿಗೆ ಇಂಟರ್ನೆಟ್ ಸೌಕರ್ಯ ಒದಗಿಸಲಿದೆ. ಇದಲ್ಲದೆ ಈಗಾಗಲೇ ರಾಜ್ಯ ನಿರ್ಧರಿಸಿರುವ ಜ್ಞಾನ ಆಧಾರಿತ ಆರ್ಥಿಕ ವ್ಯವಸ್ಥೆಗೆ ಬಲ ನೀಡಲಿದೆ. ಕೋವಿಡ್ 19 ನಂತರದ ಕಾಲದಲ್ಲಿ  ಇಂಟರ್ನೆಟ್ ಸೇವೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದ್ದು, ಇದರಿಂದ ಶಾಲೆಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರ ಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT