ದೇಶ

ಕೇವಲ ಭರವಸೆಗಳನ್ನಷ್ಟೇ ನೀಡುವ ಕಾಂಗ್ರೆಸ್ ಒಂದನ್ನೂ ಈಡೇರಿಸಿಲ್ಲ: ಬಿಹಾರದಲ್ಲಿ ಪ್ರಧಾನಿ ಮೋದಿ ಭಾಷಣ

Manjula VN

ಅರಾರಿಯಾ: ಚುನಾವಣೆ ವೇಳೆ ಸಾಕಷ್ಟು ಭರವಸೆಗಳನ್ನು ನೀಡುವ ಕಾಂಗ್ರೆಸ್ ಈ ವರೆಗೂ ಒಂದನ್ನೂ ಈಡೇರಿಸಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಗ್ದಾಳಿ ನಡೆಸಿದ್ದಾರೆ. 

ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆಯ ಫೋರ್ಬೆಸ್ಗಂಜ್'ನಲ್ಲಿ ನಡೆಯುತ್ತಿರುವ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಮೋದಿಯವರು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. 

ಚುನಾವಣೆ ವೇಳೆ ಕಾಂಗ್ರೆಸ್ ಸಾಕಷ್ಟು ಭರವಸೆಗಳನ್ನು ನೀಡುತ್ತದೆ, ಆದರೆ, ಒಂದನ್ನೂ ಈಡೇರಿಸಿಲ್ಲ. ಚುನಾವಣೆ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಾರೆ. ವ್ಯಾಪಾರಿಗಳನ್ನು ಭೇಟಿ ಮಾಡಿದ ಕೂಡಲೇ ತೆರಿಗೆ ಕಡಿಮೆ ಮಾಡುವುದಾಗಿ ಹೇಳುತ್ತಾರೆ. ಕಳೆದ 10 ವರ್ಷಗಳಲ್ಲಿ ನೀಡಿರುವ ಯಾವುದೇ ಒಂದು ಭರವಸೆಗಳನ್ನು ಈಡೇರಿಸಿಲ್ಲ. ಇದರ ಪರಿಣಾಮ ಲೋಕಸಭೆ ಹಾಗೂ ರಾಜ್ಯಸಭೆ ಎರಡಲ್ಲೂ ಸೇರಿಸಿದರೂ ಕಾಂಗ್ರೆಸ್ ಪಕ್ಷದಿಂದ 100 ಸಂಸದರೂ ಕೂಡ ಇಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಬಿಹಾರ ಜನತೆಯನ್ನು ಕೊಂಡಾಡಿದ ಮೋದಿಯವರು, ‘ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಬಿಹಾರದ ಜನತೆ ಮನೆಯಿಂದ ಹೊರಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.ಈ ಮೂಲಕ ಇಂತಹ ಸಂಕಷ್ಟದ ಸಮಯದಲ್ಲಿಯೂ ಪ್ರಜಾಪ್ರಭುತ್ವದ ಶಕ್ತಿ ಎನೆಂಬುದನ್ನು ಇಡೀ ಪ್ರಪಂಚಕ್ಕೆ ತೋರಿಸಿದ್ದೀರಿ. ಪ್ರಜಾಪ್ರಭುತ್ವದ ಮಹಾಶಕ್ತಿಯು ಮತ್ತು ಪ್ರಜಾಪ್ರಭುತ್ವದೆಡೆಗಿನ ಬಿಹಾರದ ಪ್ರತಿಯೊಬ್ಬ ವ್ಯಕ್ತಿಯ ಸಮರ್ಪಣಾ ಮನೋಭಾವವೂ ಇಡೀ ವಿಶ್ವದ ಆತ್ಮವಿಶ್ವಾಸವನ್ನು ಬಿಂಬಿಸಿದೆ’ ಎಂದು ಬಣ್ಣಿಸಿದ್ದಾರೆ.

‘ಬಿಹಾರ ಚುನಾವಣೆಯ 2ನೇ ಹಂತದ ಮತದಾನವು ಇಂದು ನಡೆಯುತ್ತಿದೆ. ಮೊದಲ ಹಂತದ ಮತದಾನಕ್ಕೆ ಹೋಲಿಸಿದರೆ ಈ ಬಾರಿ ಬೆಳಿಗ್ಗೆ 10 ಗಂಟೆ ವೇಳೆಗೆ ಹೆಚ್ಚಿನ ಮತದಾನವಾಗಿದೆ’ ಎಂಬುದು ತಿಳಿದುಬಂದಿದೆ ಎಂದೂ ಪ್ರಧಾನಿ ಮೋದಿಯವರು ತಿಳಿಸಿದ್ದಾರೆ. 

ಕೋವಿಡ್ ಮಾರ್ಗಸೂಚಿ ಅನುಸರಿಸಿಕೊಂಡು ಚುನಾವಣೆ ನಡೆಸುತ್ತಿರುವ ಚುನಾವಣಾ ಆಯೋಗ, ಆಡಳಿತ ಸಿಬ್ಬಂದಿ ಮತ್ತು ಭದ್ರತಾ ಪಡೆ ಸಿಬ್ಬಂದಿಗೆ ಇದೇ ವೇಳೆ ಮೋದಿಯವರು ಧನ್ಯವಾದಗಳನ್ನು ಹೇಳಿದ್ದಾರೆ. 

17 ಜಿಲ್ಲೆಗಳ ವ್ಯಾಪ್ತಿಗೆ ಬರುವ, 94 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು. 2.85 ಕೋಟಿ ಮತದಾರರಿದ್ದಾರೆ. 1,463 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ. 

SCROLL FOR NEXT