ದೇಶ

ಕಮಲಾ ಹ್ಯಾರಿಸ್ ಪೂರ್ವಜರು ನೆಲೆಸಿದ್ದ ಊರು: ಈ ಗ್ರಾಮಸ್ಥರಿಗೆ ಖುಷಿಯೋ ಖುಷಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ 

Sumana Upadhyaya

ತಂಜಾವೂರು: ಬೆಳಕಿನ ಹಬ್ಬ ದೀಪಾವಳಿ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಪೈಂಗನಾಡು ಗ್ರಾಮಸ್ಥರಿಗೆ ಒಂದು ವಾರ ಮೊದಲೇ ಬಂದಿದೆ. ಅದಕ್ಕೆ ಕಾರಣ ಅಮೆರಿಕ ಉಪಾಧ್ಯಕ್ಷೆಯಾಗಲು ಹೊರಟಿರುವ ಕಮಲಾ ಹ್ಯಾರಿಸ್.

ಕಮಲಾ ಹ್ಯಾರಿಸ್ ಅವರ ತಾಯಿಯವರ ಮೂಲ ಊರು ಈ ಹಳ್ಳಿಯಾಗಿರುವುದರಿಂದ ಕಮಲಾ ಹ್ಯಾರಿಸ್ ಗೆ ತಮಿಳು ನಾಡು ನಂಟಿದೆ. ಹೀಗಾಗಿ ಗ್ರಾಮಸ್ಥರು ತಮ್ಮೂರಿನ ಹೆಣ್ಣುಮಗಳು ಇಂದು ವಿಶ್ವದ ಆರ್ಥಿಕ ಬಲಿಷ್ಠ ದೇಶದ ಮೊದಲ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ ಎಂದು ಸಹಜವಾಗಿ ಖುಷಿಪಟ್ಟಿದ್ದಾರೆ. ಇಂದು ಬೆಳಗ್ಗೆ ಗ್ರಾಮದಲ್ಲಿ ಜನರು ಪಟಾಕಿ ಹಚ್ಚಿ, ಸಿಹಿತಿಂಡಿ ಹಂಚಿ, ಕಮಲಾ ಹ್ಯಾರಿಸ್ ಫೋಟೋದೊಂದಿಗೆ ಭಿತ್ತಿಪತ್ರ ಹಿಡಿದು ಸಂಭ್ರಮಪಟ್ಟರು, ಅನೇಕ ಮನೆಗಳ ಮುಂದೆ ಹೆಣ್ಣುಮಕ್ಕಳು ರಂಗೋಲಿ ಬಳಿದು ಸಾಂಪ್ರದಾಯಿಕವಾಗಿ ತಮ್ಮ ಖುಷಿ ವ್ಯಕ್ತಪಡಿಸಿದರು.

ಗ್ರಾಮದೇವತೆ ಶ್ರೀ ಧರ್ಮ ಶಾಸ್ತ ಅಯ್ಯನರ್ ಗೆ ಸಲ್ಲಿಸಿದ ಪ್ರಾರ್ಥನೆ ಫಲ ಕೊಟ್ಟಿದೆ ಎನ್ನುತ್ತಾರೆ ಗ್ರಾಮದ ಮುಖ್ಯಸ್ಥ ಸುಧಾಕರ್. ಕಮಲಾ ಹ್ಯಾರಿಸ್ ಅವರ ತಾಯಿಯ ತಂದೆ, ಅಜ್ಜ ಪಿ ವಿ ಗೋಪಾಲನ್ ಅವರು ಕಟ್ಟಿಸಿದ ಕುಲ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಪಿ ವಿ ಗೋಪಾಲನ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಈ ಗ್ರಾಮವನ್ನು 1930ರ ಹೊತ್ತಿಗೆ ತೊರೆದಿದ್ದರೂ ಕೂಡ ಗ್ರಾಮಸ್ಥರು ಮಾತ್ರ ಮರೆತಿಲ್ಲ. 

ಕಮಲಾ ಹ್ಯಾರಿಸ್ ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯಾದ ಓಕ್ಲಾಂಡ್ ನಲ್ಲಿ, ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈಯಲ್ಲಿ ಜನಿಸಿದ್ದರು. ನಮ್ಮ ಗ್ರಾಮದ ಮಗಳು ಕಮಲಾ ಹ್ಯಾರಿಸ್ ಇಲ್ಲಿಗೆ ಭೇಟಿ ಕೊಡಬೇಕು ಎಂದು ನಾವು ಬಯಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

SCROLL FOR NEXT