ದೇಶ

ಬಿಹಾರ ಚುನಾವಣೆ 2020: 7 ಲಕ್ಷ ಮತದಾರರಿಂದ ನೋಟಾ ಆಯ್ಕೆ!

Srinivasamurthy VN

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬರೊಬ್ಬರಿ 7 ಲಕ್ಷ ಮತದಾರರು ನೋಟಾ ಒತ್ತಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 

ಹೌದು.. ಮೂರು ಹಂತಗಳ ಬಿಹಾರ ಚುನಾವಣೆಯಲ್ಲಿ ತಾರಾ ಪ್ರಚಾರಕರು ಮತ ಸೆಳೆಯಲು ಯತ್ನಿಸಿದ್ದರೆ ಮತದಾರರ ಸಣ್ಣ ಗುಂಪೊಂದು ಮತ್ತೊಂದು ಆಯ್ಕೆಯಾದ ‘ಮೇಲಿನ ಯಾವುದೂ ಅಲ್ಲ (ನೋಟಾ)’ ಇದಕ್ಕೆ ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ  ಮತದಾನ ಮಾಡಿದ ಬಿಹಾರದ ಒಟ್ಟಾರೆ ಮತದಾರರ ಪೈಕಿ ಶೇ.1.69ರಷ್ಟು ಮತದಾರರು ಅಂದರೆ 6,89,135 ಮಂದಿ ಮತದಾರರು ನೋಟಾ ಆಯ್ಕೆ ಒತ್ತಿದ್ದಾರೆ. 

ಬಿಹಾರದಲ್ಲಿ 2015ರಲ್ಲಿ ಮೊದಲ ಬಾರಿಗೆ ಮತದಾರರಿಗೆ ‘ನೋಟಾ’ ಆಯ್ಕೆ ನೀಡಲಾಗಿತ್ತು. ಆಗ ಒಟ್ಟು ಚಲಾವಣೆಯಾದ 3,81,20,124 ಮತಗಳ ಪೈಕಿ 9,47,279 ‘ನೋಟಾ’ಗೆ ಚಲಾವಣೆಯಾಗಿದ್ದವು. ‘ನೋಟಾ’ ಮತಹಂಚಿಕೆ ಪ್ರಮಾಣ ಶೆ 2.48ರಷ್ಟಿತ್ತು.

ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತ ನೀಡಲು ಇಚ್ಛಿಸದ ಮತದಾರರಿಗಾಗಿ ‘ನೋಟಾ’ ಆಯ್ಕೆ ನೀಡಲಾಗಿದೆ. ‘ನೋಟಾ’ ಪರಿಕಲ್ಪನೆಯನ್ನು 2009ರಲ್ಲಿ ಪರಿಚಯಿಸಲಾಗಿತ್ತಾದರೂ ಮೊದಲು ಅನುಷ್ಠಾನಗೊಳಿಸಿದ್ದು 2013ರ ಮಿಜೋರಾಂ, ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ದೆಹಲಿ ವಿಧಾನಸಭೆ  ಚುನಾವಣೆಗಳಲ್ಲಿ. ನಿರ್ದಿಷ್ಟ ಸ್ಥಾನ ಅಥವಾ ಕ್ಷೇತ್ರದಲ್ಲಿ ‘ನೋಟಾ’ ಆಯ್ಕೆಯು ಅತಿ ಹೆಚ್ಚು ಮತಗಳನ್ನು ಪಡೆದರೆ, ಅಲ್ಲಿ ಚುನಾವಣೆ ಅಮಾನ್ಯವಾಗುವುದಿಲ್ಲ. ಬದಲಿಗೆ ನಂತರದ ಅತಿಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಕಾರಣಕ್ಕಾಗಿ ಈ ಬಾರಿ ‘ನೋಟಾ’ ಪರ ಕಡಿಮೆ ಮತ  ಚಲಾವಣೆಯಾಗುವ ಸಾಧ್ಯತೆ ಇದೆ.

SCROLL FOR NEXT