ದೇಶ

ವರವರ ರಾವ್‌ಗೆ ಮತ್ತೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್, ಖಾಸಗಿ ವೈದ್ಯರಿಂದ ಆರೋಗ್ಯ ತಪಾಸಣೆಗೆ ಆದೇಶ

Lingaraj Badiger

ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಹಾಗೂ ಖ್ಯಾತ ಕವಿ ವರವರ ರಾವ್ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಮತ್ತೆ ಜಾಮೀನು ನಿರಾಕರಿಸಿದೆ.

ಜಾಮೀನು ಕೋರಿ ವರವರ ರಾವ್ ಅವರ ಪತ್ನಿ ಹೇಮಲತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಎಕೆ ಮೆನೋನ್ ನೇತೃತ್ವದ ವಿಭಾಗೀಯ ಪೀಠ, ಆರೋಪಿಗೆ ಈ ಸಮಯದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ ಖಾಸಗಿ ಆಸ್ಪತ್ರೆಯ ವೈದ್ಯರ ತಂಡದಿಂದ ಜೈಲಿನಲ್ಲಿರುವ ವರವರ ರಾವ್ ಅವರ ಆರೋಗ್ಯ ತಪಾಸಣೆ ನಡೆಸುವಂತೆ ಆದೇಶಿಸಿದೆ.

ವರವರ ರಾವ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆಯ ಅವಶ್ಯಕತೆಯಿದೆ. ಹೀಗಾಗಿ ಈ ಕೂಡಲೇ ಅವರಿಗೆ ಜಾಮೀನು ನೀಡಬೇಕೆಂದು ಹೇಮಲತಾ ಪರ ವಕೀಲೆ ಇಂದಿರಾ ಜೈಸಿಂಗ್ ಮನವಿ ಮಾಡಿದ್ದರು.

ಆದರೆ ಈ ಮನವಿಯನ್ನು ತಳ್ಳಿ ಹಾಕಿದ ನ್ಯಾಯಾಧೀಶರು, ವೈದ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ವರವರ ರಾವ್ ಆರೋಗ್ಯ ವಿಚಾರಣೆ ನಡೆಸಬಹುದಾಗಿದ್ದು, ಜಾಮೀನು ನೀಡುವ ಅಬಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.

ಇಂದೇ ವರವರ ರಾವ್ ಆರೋಗ್ಯ ವಿಚಾರಣೆ ನಡೆಸುವಂತೆ ಸೂಚಿಸಿದ ನ್ಯಾಯಾಧೀಶರು, ನ.17ರಂದು ನ್ಯಾಯಾಲಯ ಅವರ ಆರೋಗ್ಯ ಪರಿಸ್ಥಿತಿಯ ಕುರಿತು ಮತ್ತೊಮ್ಮೆ ಮಾಹಿತಿ ಪಡೆಯಲಿದೆ ಎಂದು ಸ್ಪಷ್ಟಪಡಿಸಿದರು.

SCROLL FOR NEXT