ದೇಶ

ಜಗತ್ತಿನ ಯಾವುದೇ ಶಕ್ತಿ 370ನೇ ವಿಧಿಯನ್ನು ಹಿಂದಕ್ಕೆ ತರಲಾರದು: ಬಿಜೆಪಿ

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ಪರಿಚ್ಛೇದದ ರದ್ದತಿ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟ್ ನಿಯಮದ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್‌ ಶಾನವಾಜ್ ಹುಸೇನ್‌, ಭೂಮಿಯ ಮೇಲಿನ ಯಾವುದೇ ಶಕ್ತಿ ಅದನ್ನು ಹಿಂದಕ್ಕೆ ತರಲು ಸಾಧ್ಯವಿಲ್ಲ ಎಂದಿದ್ದಾರೆ.

ಮುಂಬರುವ ಜಿಲ್ಲಾ ಅಭಿವೃದ್ಧಿ ಪರಿಷತ್‌(ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕಾಶ್ಮೀರಕ್ಕೆ ಭೇಟಿ ನೀಡಿರುವ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

370ನೇ ಪರಿಚ್ಛೇದ ರದ್ದುಗೊಳಿಸಿದ ವಿಚಾರ ನ್ಯಾಯಾಲಯದ ಉಲ್ಲಂಘನೆಯಾಗಿಲ್ಲ. ಯಾರಾದರೂ ನನ್ನ ಸುದ್ದಿಗೋಷ್ಠಿ ವಿರುದ್ಧ ನ್ಯಾಯಾಲಯದ ಮೊರೆ ಹೋದಲ್ಲಿ ಅದನ್ನು ನಿಷೇಧಿಸಲಾಗುತ್ತದೆಯೇ? 370ನೇ ಪರಿಚ್ಛೇದ ಪುನಶ್ಚೇತನಗೊಳ್ಳುವುದಿಲ್ಲ. ಜಗತ್ತಿನ ಯಾವುದೇ ಶಕ್ತಿ ಅದನ್ನು ಹಿಂದಕ್ಕೆ ತರಲಾಗದು. ಕಾಶ್ಮೀರದ ಯುವಕರು ಈ ನಿಯಮ ಉತ್ತಮ ಉದ್ದೇಶದಿಂದ ಮಾಡಲಾಗಿದೆ ಮತ್ತು ಹಿಂದಕ್ಕೆ ತರಲಾಗದು ಎಂಬ ಸತ್ಯವನ್ನು ಅರಿಯಬೇಕು ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಜನರು ಪ್ರಧಾನಿ ಮೋದಿ ಹಾಗೂ ಅವರ 'ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌' ಮಂತ್ರದಲ್ಲಿ ಸಂಪೂರ್ಣ ನಂಬಿಕೆ ಇರಿಸಿದ್ದಾರೆ ಎಂದರು.

ಗುಪ್ಕರ್‌ ಘೋಷಣೆಗಾಗಿ ಜನರ ಮೈತ್ರಿ(ಪಿಎಜಿಡಿ) ವಿರುದ್ಧ ಕಿಡಿಕಾರಿದ ಅವರು, ಇಲ್ಲಿನ ಕೆಲ ಜನಪ್ರತಿನಿಧಿಗಳು ಸ್ವಜನ ಪಕ್ಷಪಾತಿಗಳಾಗಿದ್ದು, ತಮ್ಮ ಕುಟುಂಬ ಸದಸ್ಯರ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರು ಮಾತ್ರ ಬಡವರಾಗಿಯೇ ಉಳಿದಿದ್ದಾರೆ. ಆದರೆ, ಬಿಜೆಪಿ ಅಭಿವೃದ್ಧಿಯ ಮಂತ್ರವೊಂದನ್ನು ಮಾತ್ರ ಹೊತ್ತು ಬಂದಿದ್ದು, ಜನರು ಬೆಂಬಲ ಸೂಚಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT