ದೇಶ

ಅನಾಗರಿಕ, ನಾಚಿಕೆಗೇಡಿನ ಘಟನೆ ಖಂಡಿಸಲು ಯಾವುದೇ ಪದಗಳಿಲ್ಲ: ಹತ್ರಾಸ್ ಘಟನೆಯ ಕುರಿತು ಮಮತಾ

Manjula VN

ಕೋಲ್ಕತಾ: ಹತ್ರಾಸ್ ನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇಂತಹ ಅನಾಗರೀಕ, ನಾಚಿಕೆಗೇಡಿನ ಘಟನೆ ಖಂಡಿಸಲು ನನ್ನ ಬಳಿ ಯಾವುದೇ ಪದಗಳಿಲ್ಲ ಎಂದು ಹೇಳಿದ್ದಾರೆ. 

ಕುಟುಂಬಸ್ಥರ ವಿರೋಧದ ನಡುವಲ್ಲೂ ಮಾಹಿತಿ ನೀಡದೆಯೇ ಪೊಲೀಸರು ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ ನೆರೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಕೆಲಸವಾಗಿದೆ. ಚುನಾವಣೆ ವೇಳೆ ಘೋಷಣೆಗಳನ್ನು ಮಾಡುವುದು ಭರವಸೆಗಳನ್ನು ನೀಡುವುದೆಲ್ಲವೂ ಈ ಘಟನೆಯಿಂದ ಬಹಿರಂಗಗೊಂಡಿದೆ ಎಂದು ತಿಳಿಸಿದ್ದಾರೆ. 

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್​ರೇಪ್​ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದ್ದು, ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದಾರೆ. ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದಾರೆ. ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದರು. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು, ಎಸ್ಐಟಿ ತನಿಖೆಗೆ ವಹಿಸಿದ್ದರು. ಅಲ್ಲದೆ, ಸಂತ್ರಸ್ತೆಯ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ಘೋಷಣೆ ಮಾಡಿ, ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದೆ. 

SCROLL FOR NEXT