ದೇಶ

ಶಾಹೀನ್ ಬಾಗ್ ನಂತಹ ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ಶಾಹೀನ್ ಬಾಗ್ ನಂತಹ ಸಾರ್ವಜನಿಕ ಸ್ಥಳಗಳನ್ನು ಪ್ರತಿಭಟನೆಗಳಿಗೆ ಅನಿರ್ದಿಷ್ಟಾವಧಿಗೆ ಬಳಸಿಕೊಳ್ಳುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.

ನಾಗರಿಕ (ತಿದ್ದುಪಡಿ) ಮಸೂದೆ ವಿರೋಧಿಸಿ ಕಳೆದ ವರ್ಷ ಡಿಸೆಂಬರ್ 14ರಂದು ಶಾಹೀನ್ ಬಾಗ್ ನಲ್ಲಿ ತೀವ್ರ ಪ್ರತಿಭಟನೆ ಆರಂಭವಾಗಿತ್ತು. ನಂತರ ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾರ್ಚ್ 24ರಂದು ಘೋಷಣೆಯಾದ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು. ಡಿಸೆಂಬರ್ ಗಿಂತಲೂ ಮೊದಲೇ ಇಲ್ಲಿ ಪ್ರತಿಭಟನೆ ಆರಂಭವಾಗಿ ಸಾರ್ವಜನಿಕ ಓಡಾಟದ ಸ್ಥಳ ಶಾಹೀನ್ ಬಾಗ್ ನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಇದರಿಂದ ಜನರಿಗೆ ಓಡಾಟಕ್ಕೆ ತೀವ್ರ ತೊಂದರೆಯಾಗಿತ್ತು.

ಪ್ರತಿಭಟನಾಕಾರರ ಕ್ರಮ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳನ್ನು ಅನಿರ್ದಿಷ್ಟಾವಧಿಗೆ ಪ್ರತಿಭಟನೆಗೆಂದು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಭಟನೆಗಳನ್ನು ನಿಗದಿತ ಪ್ರದೇಶಗಳಲ್ಲಿ ಮಾಡಬೇಕು, ಅದಕ್ಕೆ ಪೂರ್ವಾನುಮತಿ ತೆಗೆದುಕೊಳ್ಳಬೇಕು ಎಂದು ಆದೇಶ ನೀಡಿದೆ.

SCROLL FOR NEXT