ದೇಶ

ಯಾವುದೇ ಪರಿಸ್ಥಿತಿಯಲ್ಲೂ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಸಿದ್ಧ: ಭದೌರಿಯಾ

Manjula VN

ನವದೆಹಲಿ: ಯಾವುದೇ ಪರಿಸ್ಥಿತಿಯಲ್ಲೂ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಸಿದ್ಧವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಗುರುವಾರ ಹೇಳಿದ್ದಾರೆ. 

88ನೇ ವಾಯುಪಡೆ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಭಾರತೀಯ ವಾಯುಪಡೆ 89ನೇ ವರ್ಷಕ್ಕೆ ಕಾಲಿಡುತ್ತಿದ್ದು, ಐಎಎಫ್ ಪರಿವರ್ತನೆಯ ಬದಲಾವಣೆಗಳನ್ನು ಕಾಣುತ್ತಿದೆ. ನಾವು ಯುಗವನ್ನು ಪ್ರವೇಶಿಸುತ್ತಿದ್ದು, ಏರೋಸ್ಪೇಸ್ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ ಮತ್ತು ಸಮಗ್ರ ಮಲ್ಡಿ ಡೊಮೇನ್ ಕಾರ್ಯಾಚರಣೆಗಳನ್ನು ನಡೆಸುತ್ತೇವೆಂದು ಹೇಳಿದ್ದಾರೆ. 

ಈ ವರ್ಷ ನಿಜಕ್ಕೂ ಅಭೂತಪೂರ್ವವಾಗಿದೆ. ಕೊರೋನಾ ಸೋಂಕು ವಿಶ್ವದಾದ್ಯಂತ ಹರಡುತ್ತಿದ್ದು, ಕೊರೋನಾವನ್ನು ಭಾರತ ದಿಟ್ಟವಾಗಿ ಎದುರಿಸುತ್ತಿದೆ. ಈ ಅವಧಿಯಲ್ಲೂ ಪೂರ್ಣಪ್ರಮಾಣದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಮರ್ಥ್ಯ ನಮ್ಮ ಯೋಧರಿಗಿದೆ. ಯಾವುದೇ ಪರಿಸ್ಥಿತಿಯಲ್ಲಿ ದೇಶದ ಸಾರ್ವಭೌಮತ್ವ, ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಬದ್ಧವಾಗಿದೆ ಎಂಬ ಭರವಸೆಯನ್ನು ಈ ಮೂಲಕ ನೀಡುತ್ತೇನೆ.

ಉತ್ತರದ ಗಡಿ ಭಾಗದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪರಿಸ್ಥಿತಿಯನ್ನು ಉತ್ತಮವಾಗಿ ಎದುರಿಸಿದ ಯೋಧರನ್ನು ಈ ಮೂಲಕ ಶ್ಲಾಘಿಸುತ್ತೇನೆಂದು ತಿಳಿಸಿದ್ದಾರೆ. 

ಇಂದು 88ನೇ ಭಾರತೀಯ ವಾಯುಸೇನಾ ಸಂಸ್ಥಾಪನಾ ದಿನ. ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟ ಸೇವೆ ಸಲ್ಲಿಸುತ್ತಿರುವ , ವೀರ ವಾಯು ಯೋಧರ ಪರಿಶ್ರಮವನ್ನು ದೇಶ ಸ್ಮರಿಸುತ್ತಿದೆ.

ಭಾರತೀಯ ವಾಯುಪಡೆ 1932ರ ಅಕ್ಟೋಬರ್ 8 ರಂದು ಪ್ರಾರಂಭವಾಗಿದ್ದು, ಅಂದಿನಿಂದ ದೇಶ ರಕ್ಷಣೆಗೆ ತನ್ನನ್ನು ಅರ್ಪಿಸಿಕೊಂಡಿದೆ. ವಾಯು ಸೇನಾ ದಿನದ ಅಂಗವಾಗಿ ಗಾಜಿಯಾಬಾದ್ ಹಾಗೂ ಹಿಂಡನ್ ವಾಯುನೆಲೆಯಲ್ಲಿ ವಾಯುಪಡೆ ಪರೇಡ್ ಆಯೋಜಿಸಲಾಗಿದೆ. ವಿಶೇಷವಾಗಿ ಹಿಂಡನ್ ನಲ್ಲಿ ದೇಶ ರಕ್ಷಣೆಗೆ ಕೊಡುಗೆ ನೀಡಿದ ವಿವಿಧ ವಿಮಾನಗಳನ್ನು ಪ್ರದರ್ಶಿಸಲಾಯಿತು. 

ಆಕಾಶಗಂಗಾ- ಸ್ಕೈಡೈವಿಂಗ್ ತಂಡ ಈ ಸಂದರ್ಭದಲ್ಲಿ ಸಾಹಸ ಪ್ರದರ್ಶಿಸಿತು. ಎಎನ್- 32 ಯುದ್ಧ ವಿಮಾನ ಆಕರ್ಷಕ ಚಿತ್ತಾರ ಮೂಡಿಸಿತು. ವಿಂಟೇಜ್ ವಿಮಾನ ಹಾಗೂ ವಾಯುಸೇನೆಯ ಆಧುನಿಕ ಮುಂಚೂಣಿ ಯುದ್ಧ ವಿಮಾನಗಳು ಗಮನ ಸೆಳೆದವು.

SCROLL FOR NEXT