ದೇಶ

ನಾಗರಿಕ ಸೇವೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ: ಪಂಜಾಬ್ ಸರ್ಕಾರದ ಮಹತ್ವದ ತೀರ್ಮಾನ

Srinivasamurthy VN

ಚಂಡೀಘಡ: ನಾಗರಿಕ ಸೇವೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ಪಂಜಾಬ್ ಸರ್ಕಾರ ನಿರ್ಧರಿಸಿದ್ದು, ಈ ನಿರ್ಧಾರಕ್ಕೆ ಸಿಎಂ ಅಮರೀಂದರ್ ಸಿಂಗ್ ಸಚಿವ ಸಂಪುಟ ಕೂಡ ಒಪ್ಪಿಗೆ ನೀಡಿದೆ.

ಸಿಎಂ ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, 2022ರ ಮಾರ್ಚ್‌ಗೆ ಮೊದಲು ರಾಜ್ಯದ 1 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಸಲು 'ರಾಜ್ಯ ಉದ್ಯೋಗ ಯೋಜನೆ 2020-22' ಜಾರಿಗೆ ಮುಖ್ಯಮಂತ್ರಿ ಕ್ಯಾಪ್ಟನ್‌  ಅಮರಿಂದರ್‌ ಸಿಂಗ್‌ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಪಂಜಾಬ್‌ ನಾಗರಿಕ ಸೇವಾ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಇದರಿಂದ ಎ, ಬಿ, ಸಿ ಮತ್ತು ಡಿ ದರ್ಜೆಯ ಸರಕಾರಿ ನೌಕರರ ಹುದ್ದೆಗಳು, ನಿಗಮ ಮತ್ತು ಮಂಡಳಿಯ ಹುದ್ದೆಗಳಿಗೆ ಮಹಿಳೆಯರನ್ನು  ನೇರವಾಗಿ ನೇಮಕ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಯೋಜನೆಯಂತೆ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕ ನಡೆಸಲಾಗುತ್ತದೆ. 50,000 ಹುದ್ದೆಗಳಿಗೆ 2021ರಲ್ಲಿ ನೇಮಕ ಮಾಡಿಕೊಂಡು ಮುಂದಿನ ವರ್ಷದ ಸ್ವಾತಂತ್ರ್ಯ ದಿನಾಚರಣೆ ದಿನ ಇವರನ್ನೆಲ್ಲಾ ಉದ್ಯೋಗಕ್ಕೆ ಸೇರಿಸಿಕೊಳ್ಳುವುದು ಸರಕಾರದ  ಯೋಜನೆಯಾಗಿದೆ. ಉಳಿದ 50,000 ಹುದ್ದೆಗಳನ್ನು 2022ರಲ್ಲಿ ಭರ್ತಿ ಮಾಡಲಾಗುತ್ತದೆ. ಇದೇ ವೇಳೆ ರಾಜ್ಯ ಸರಕಾರಿ ನೌಕರರ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ತೀರ್ಮಾನವನ್ನು ಅಮರಿಂದರ್‌ ಸಿಂಗ್‌ ನೇತೃತ್ವದ ಪಂಜಾಬ್‌ ಸರಕಾರ ತೆಗೆದುಕೊಂಡಿದೆ. ಈ  ಕಾರಣಕ್ಕೆ ‘ಪಂಜಾಬ್‌ ನಾಗರಿಕ ಸೇವಾ ಕಾಯಿದೆ- 2020'ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. 

'ಸಾರ್ವಜನಿಕ ಸೇವೆಯಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಬಹು ಸದಸ್ಯರ ಆಯೋಗವನ್ನು ಸ್ಥಾಪಿಸಲು ಕಳೆದ ತಿಂಗಳು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಅನುಮೋದನೆ ನೀಡಿತ್ತು.

SCROLL FOR NEXT