ದೇಶ

ಬಿಹಾರ ರಾಜ್ಯ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ನೀಡುವ ಭರವಸೆ!

Manjula VN

ಪಾಟ್ನಾ: ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆಯನ್ನು ನೀಡಿದೆ. 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಿಜೆಪಿ ಹಿರಿಯ ಮುಖಂಡ ಭೂಪೇಂದರ್ ಯಾದವ್, ಅಶ್ವಿನಿ ಚೌಹೆ, ಪ್ರಮೋದ್ ಕುಮಾರ್, ನಿತ್ಯಾನಂದ ರೇ ಅವರು ಉಪಸ್ಥಿತರಿದ್ದರು. 

ಪ್ರಣಾಳಿಕೆ ಬಿಡುಗಡೆಗೊಳಿಸಿರುವ ಬಿಜೆಪಿ, ಎಲ್ಲರಿಗೂ ಉಚಿಕ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆ, ರಾಜ್ಯ ಕಾರ್ಮಿಕರಿಗೆ ಬಿಹಾರ ರಾಜ್ಯದಲ್ಲಿಯೇ ಉದ್ಯೋ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡುವುದಾಗಿ ತಿಳಿಸಿದೆ. 

ಕೊರೋನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ಎನ್'ಡಿಎ ಸರ್ಕಾರ ಉದಾಹರಣೆಯಾಗಿದೆ. ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ಕೂಡಲೇ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು ನಮ್ಮ ಸಂಕಲ್ಪವಾಗಿದೆ. ಲಸಿಕೆಗೆ ಅನುಮತಿ ದೊರಕಿದ ಕೂಡಲೇ ಪ್ರತೀಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಪ್ರಣಾಳಿಕೆಯಲ್ಲಿ ಇದು ನಾವು ನೀಡುತ್ತಿರುವ ಮೊದಲ ಭರವಸೆಯಾಗಿದೆ. 

ಬಿಜೆಪಿ ಹಿರಿಯ ನಾಯಕ ಮಾತನಾಡಿ, ಬಿಹಾರವು ಒಂದು ರಾಜ್ಯವಾಗಿದ್ದು, ಇಲ್ಲಿರುವ ಪ್ರತೀಯೊಬ್ಬ ನಾಗರಿಕ ರಾಜಕೀಯವಾಗಿ ಸೂಕ್ಷ್ಮವಾಗಿದ್ದಾನೆ. ಮತ್ತು ರಾಜಕೀಯದ ಕುರಿತು ಉತ್ತಮ ಮಾಹಿತಿಗಳನ್ನು ತಿಳಿದಿರುವವರಾಗಿದ್ದಾರೆ. ಪಕ್ಷಗಳು ಮಾಡುವ ಭರವಸೆಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಮ್ಮ ಪ್ರಣಾಳಿಕೆ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಆ ಪ್ರಶ್ನೆಗೆ ಉತ್ತರಿಸಲು ನಾವು ಸಿದ್ಧರಿದ್ದೇವೆ. ಭರವಸೆಯನ್ನು ಈಡೇರಿಸುವ ವಿಶ್ವಾಸ ಹೊಂದಿದ್ದೇವೆಂದು ಹೇಳಿದ್ದಾರೆ. 

ನಿರ್ಮಲಾ ಸೀತಾರಾಮನ್ ಅವರು ಮಾತನಾಡಿ, ಬಿಹಾರದಲ್ಲಿ ಒಟ್ಟು ದೇಶೀಯ ಉತ್ಪನ್ನವು ಎನ್‌ಡಿಎ ಅಧಿಕಾರದ ಅವಧಿಯಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದ್ದು, ಬಿಹಾರದಲ್ಲಿ ಜಿಡಿಪಿ ಶೇ 3 ರಿಂದ 11.3 ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ಜೆಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

SCROLL FOR NEXT