ದೇಶ

ಬಿಹಾರ ಚುನಾವಣೆಯಲ್ಲಿ ಹಣದುಬ್ಬರ ಪ್ರಮುಖ ವಿಷಯ, ನಿತೀಶ್ ಆಳ್ವಿಕೆಯಲ್ಲಿ 60 ಹಗರಣ ನಡೆದಿವೆ: ತೇಜಶ್ವಿ ಯಾದವ್

Lingaraj Badiger

ಪಾಟ್ನಾ: ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವುದರಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗದ ಜೊತೆಗೆ ಹಣದುಬ್ಬರವು ದೊಡ್ಡ ಸಮಸ್ಯೆಯಾಗಿದೆ ಎಂದು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮುಖಂಡ ತೇಜಶ್ವಿ ಯಾದವ್ ಅವರು ಸೋಮವಾರ ಹೇಳಿದ್ದಾರೆ. 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ತೇಜಶ್ವಿ ಯಾದವ್ ಅವರು, ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಸುಮಾರು 30,000 ಕೋಟಿ ರೂ.ಗಳ 60 ಹಗರಣಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ಹಣದುಬ್ಬರವು ದೊಡ್ಡ ಸಮಸ್ಯೆಯಾಗಿದೆ. ಈ ಹಿಂದೆ ಈರುಳ್ಳಿ ಕೆಜಿಗೆ 50-60 ರೂಪಾಯಿ ಆಗಿದ್ದಾಗ ಬಿಜೆಪಿಯವರು ಈರುಳ್ಳಿಯ ಹಾರವನ್ನು ಧರಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈಗ ಅದು ಕೆಜಿಗೆ 100 ರೂ. ತಲುಪುತ್ತಿದ್ದರೂ ಮೌನವಾಗಿದ್ದಾರೆ. ರಾಜ್ಯದಲ್ಲಿ ಹಸಿವು ಮತ್ತು ಬಡತನ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದರು.

"ರಾಜ್ಯದಲ್ಲಿ ನಿರುದ್ಯೋಗವಿದೆ, ಸಣ್ಣ ವ್ಯಾಪಾರಿಗಳು ನಾಶವಾಗಿದ್ದಾರೆ. ಜಿಡಿಪಿ ಕುಸಿಯುತ್ತಿದೆ, ನಾವು ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದ್ದೇವೆ. ರೈತರು ನಾಶವಾಗುತ್ತಿದ್ದಾರೆ, ಯುವಕರು ನಿರುದ್ಯೋಗಿಗಳಾಗಿದ್ದಾರೆ, ಬಿಹಾರ ಜನ ಬಡವರಾಗಿದ್ದಾರೆ. ಜನ ಶಿಕ್ಷಣ, ಉದ್ಯೋಗ ಮತ್ತು ವೈದ್ಯಕೀಯ ಸಹಾಯಕ್ಕಾಗಿ ವಲಸೆ ಹೋಗುತ್ತಿದ್ದಾರೆ" ಎಂದು ಅವರು ಹೇಳಿದರು.

SCROLL FOR NEXT