ದೇಶ

ಕೋವಿಡ್ -19 ಎಫೆಕ್ಟ್ : ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿರುವ ಲೈಂಗಿಕ ಕಾರ್ಯಕರ್ತೆಯರು

Nagaraja AB

ಕೊಲ್ಕತ್ತಾ: ಏಷ್ಯಾದ ಅತಿ ದೊಡ್ಡ ರೆಡ್ ಲೈಟ್ ಏರಿಯಾ ಸೊನಾಗಾಚಿಯ ಸುಮಾರು ಶೇ. 89 ರಷ್ಟು ಲೈಂಗಿಕ ಕಾರ್ಯಕರ್ತೆಯರು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಲದ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ವ್ಯವಹಾರ ಇಲ್ಲದೆ ಬಹುತೇಕ ಮಂದಿ ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿರುವುದಾಗಿ  ಸರ್ವೆಯೊಂದು ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕದ ನಂತರ ಶೇ.73 ರಷ್ಟು ಲೈಂಗಿಕ ಕಾರ್ಯಕರ್ತರು ವ್ಯವಹಾರವನ್ನು ತೊರೆದು ಆದಾಯದ ಹೊಸ ಮಾರ್ಗಗಳನ್ನು ಎದುರು ನೋಡುತ್ತಿದ್ದಾರೆ. ಆದರೆ, ಅವರು ಸಾಲಗಾರರು, ಪಿಂಪ್ ಗಳು , ವೇಶ್ಯಾಗೃಹ ಮಾಲೀಕರು ಮತ್ತಿತರದಿಂದ ಸಾಲ ಪಡೆದಿರುವುದರಿಂದ ಅದು ಕೂಡಾ ಸಾಧ್ಯವಾಗುತ್ತಿಲ್ಲ. ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದು  ಮಾನವ ಕಳ್ಳ ಸಾಗಣೆ ವಿರೋಧಿ ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದ ಸರ್ವೆಯಲ್ಲಿ ಬಹಿರಂಗವಾಗಿದೆ.

ಸೊನಾಗಾಚಿಯಲ್ಲಿ ಸುಮಾರು 7 ಸಾವಿರ ಲೈಂಗಿಕ ಕಾರ್ಯಕರ್ತರು ಇದ್ದಾರೆ. ಮಾರ್ಚ್ ನಿಂದ ವ್ಯವಹಾರ ಇಲ್ಲದೆ ಆದಾಯ ಇಲ್ಲದಂತಾಗಿದೆ. ಜುಲೈನಿಂದ ಶೇ. 65 ರಷ್ಟು ವ್ಯವಹಾರ ಪುನರ್ ಆರಂಭಗೊಂಡಿದೆ. ಸುಮಾರು ಶೇ. 98 ರಷ್ಟು ಲೈಂಗಿಕ ಕಾರ್ಯಕರ್ತರನ್ನು ಸರ್ವೆಗಾಗಿ ಸಂಪರ್ಕಿಸಲಾಗಿದೆ. 

ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಲೈಂಗಿಕ ಕಾರ್ಯಕರ್ತರು ಈಗ ಏಲ್ಲಿಗೆ ಹೋಗುತ್ತಾರೆ. ಈಗ ಲಾಕ್ ಡೌನ್ ತೆರವಾಗಿದ್ದರೂ ಕೂಡಾ ಸಾಂಕ್ರಾಮಿಕ ರೋಗದ ಭಯದಿಂದ ಮತ್ತೆ ವ್ಯವಹಾರ ಮಾಡದಂತಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಪರ್ಯಾಯ ಯೋಜನೆ ರೂಪಿಸುವ ಮೂಲಕ ಅವರಿಗೆ ಸಹಾಯ ಮಾಡಬೇಕಾಗಿದೆ ಎಂದು  ಮಾನವ ಕಳ್ಳಸಾಗಣೆ ವಿರೋಧಿ ಸಂಘಟನೆಯ ರಾಷ್ಟ್ರೀಯ ಯುವ ಅಧ್ಯಕ್ಷ ತಪನ್ ಸಹಾ ಒತ್ತಾಯಿಸಿದ್ದಾರೆ.

SCROLL FOR NEXT