ದೇಶ

ರಾಷ್ಟ್ರೀಯ ಏಕತಾ ದಿನ: ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪಾರ್ಚನೆ, ಪರೇಡ್ ವೀಕ್ಷಣೆ

Sumana Upadhyaya

ಗುಜರಾತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಜಲ ಅರ್ಚನೆ ಮತ್ತು ಪುಷ್ಪಾರ್ಚನೆ ಮಾಡಿದರು.

ಗುಜರಾತ್ ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತೆಯ ಪ್ರತಿಮೆಯಿದ್ದು, ಅಲ್ಲಿಗೆ ಪ್ರಧಾನಿ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ. ನಂತರ ರಾಷ್ಟ್ರೀಯ ಏಕತಾ ದಿವಸ ಪರೇಡ್ ನೆರವೇರಿದ್ದು ಅದರಲ್ಲಿ ಪ್ರಧಾನಿ ಭಾಗವಹಿಸಿ ವೀಕ್ಷಿಸಿ ಗೌರವ ಸ್ವೀಕರಿಸಿದರು.

ರಾಷ್ಟ್ರೀಯ ಏಕತಾ ದಿನ: ರಾಷ್ಟ್ರೀಯ ಏಕತಾ ದಿನವನ್ನು ಪ್ರತಿವರ್ಷ ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ದೇಶದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದಕ್ಕೆ ಕೇಂದ್ರ ಸರ್ಕಾರ 2014ರಲ್ಲಿ ಜಾರಿಗೆ ತಂದಿತು. ಈ ವರ್ಷ ಅವರ 145ನೇ ಜಯಂತಿ.

ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲರು ಸಾಕಷ್ಟು ಶ್ರಮಿಸಿದ್ದರು. ಸ್ವತಂತ್ರ ಭಾರತದಲ್ಲಿ ಪಟೇಲರು ಈ ದೇಶ ಕಂಡ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹ ಸಚಿವ. ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಪಟೇಲರು ಕಂಡಿದ್ದ ಕನಸು ಮತ್ತು ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸ ಎಂದು ಜಾರಿಗೆ ತಂದಿದೆ.

ರಾಷ್ಟ್ರೀಯ ಏಕತೆ ದಿನ ಆಚರಣೆ ಏಕೆ: ಭಾರತ ವೈವಿಧ್ಯತೆ ಹೊಂದಿರುವ ದೇಶ, ಇಲ್ಲಿನ ಧರ್ಮ, ಸಂಸ್ಕೃತಿ, ಸಂಪ್ರದಾಯ, ಭಾಷೆಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ವಿವಿಧತೆಯಲ್ಲಿ ಏಕತೆ, ಒಗ್ಗಟ್ಟು ಕಾಪಾಡಿಕೊಂಡು ಹೋಗುವುದು ದೇಶದ ಅಭಿವೃದ್ಧಿಗೆ ಮುಖ್ಯವಾಗಿದೆ. ಹೀಗೆ ಸರ್ದಾರ್ ಪಟೇಲರು ಏಕತೆಗೆ ಯಾವ ರೀತಿ ಕೊಡುಗೆ ನೀಡಿದ್ದರು ಎಂಬ ಬಗ್ಗೆ ಇಂದಿನ ಜನಾಂಗದವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ದಿನವನ್ನು ಆಚರಿಸುತ್ತಿದೆ.

2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿ ಸರ್ದಾರ ಅಣೆಕಟ್ಟಿನ ಎದುರಿಗೆ ಸರ್ದಾರ್ ವಲ್ಲಭಬಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ(597 ಅಡಿ)ಯನ್ನು ಉದ್ಘಾಟಿಸಿದ್ದರು.

SCROLL FOR NEXT