ಬೆಂಗಳೂರು: ನಾರ್ಕೊಟಿಕ್ ಕಂಟ್ರೊಲ್ ಬ್ಯೂರೊ(ಎನ್‍ಸಿಬಿ) ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿದ್ದು ಬೆಂಗಳೂರು ಮತ್ತು ಮುಂಬೈ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವನನ್ನು ಬಂಧಿಸಿದೆ.
ಬೆಂಗಳೂರಿನ ಪೇಜ್ ತ್ರೀ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪಿ ಎಫ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ದೆಹಲಿಯ ಎನ್‍ಸಿಬಿ ಮುಖ್ಯ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಅಹ್ಮದ್ ಬಳಿಯಿದ್ದ ಮೂರುವರೆ ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶಿ ಅಂಚೆ ಕಚೇರಿಯಲ್ಲಿ ಈ ಗಾಂಜಾ ಸೀಜ್ ಮಾಡಲಾಗಿದೆ. ಈ ಡ್ರಗ್ಸ್ ದೆಹಲಿಯಿಂದ ಮುಂಬೈಗೆ ಅಲ್ಲಿಂದ ಬೆಂಗಳೂರಿಗೆ ತಲುಪಬೇಕಿತ್ತು.
ಬೆಂಗಳೂರಿಗೆ ಮಾರಿಜುನಾ ಸಪ್ಲೈ ಮಾಡುತ್ತಿದ್ದ ಗೋವಾ ಮೂಲದ ಕಿಂಗ್ ಪಿನ್ ಎಫ್ ಅಹ್ಮದ್ ಎಂದು ತಿಳಿದುಬಂದಿದೆ. ಈತ ಖಾಸಗಿ ರೆಸಾರ್ಟ್ ನಲ್ಲಿ ಕಾರು ಚಾಲಕನಾಗಿದ್ದು ನಗರದ ಕೆಲ ಪ್ರಮುಖ ವ್ಯಕ್ತಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಮಾರಿಜುನಾ ಡ್ರಗ್ಸ್ 1 ಗ್ರಾಂಗೆ ಬರೋಬ್ಬರಿ 5 ಸಾವಿರ ರೂ. ಡಿಮ್ಯಾಂಡ್ ಹೊಂದಿದೆ. ಇದನ್ನು ಕೆನಡಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಡಾರ್ಕ್ ನೆಟ್ ಮೂಲಕ ಭಾರೀ ಗಾಂಜಾ ಖರೀದಿಯಾಗುತ್ತಿದೆ. ಕ್ರಿಪ್ಟೋ ಕರೆನ್ಸಿ ಮೂಲಕ ಖರೀದಿ ವ್ಯವಹಾರ ನಡೆಯುತ್ತಿದೆ ಎನ್ನಲಾಗಿದೆ.