ದೇಶ

ಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿ ನೀಡುತ್ತಿದ್ದ ಡಾಕ್ಟರ್, ಆಪ್ತ ಸಹಾಯಕ ಬಂಧನ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜನರಿಗೆ ನಕಲಿ ಕೋವಿಡ್-19 ಪರೀಕ್ಷೆ ವರದಿಯನ್ನು ನೀಡುತ್ತಿದ್ದ ಆರೋಪದ
ಮೇರೆಗೆ 34 ವರ್ಷದ ಡಾಕ್ಟರ್ ಹಾಗೂ ಆತನ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ. ಮಾಳ್ವವಿಯಾ ನಗರದ ನಿವಾಸಿ ಡಾ. ಕುಶ್ ಬಿಹಾರಿ ಪರಶರ್ ಹಾಗೂ ಆತನ ಸಹಾಯಕ ಅಮಿತ್ ಸಿಂಗ್ ಬಂಧಿತ ಆರೋಪಿಗಳೆಂದು
ಪೊಲೀಸರು ತಿಳಿಸಿದ್ದಾರೆ.

ನಕಲಿ ಕೋವಿಡ್-19 ಪರೀಕ್ಷೆ ವರದಿ ಸಂಬಂಧ ಮಾನ್ಯತೆ ಪಡೆದ ಪರೀಕ್ಷಾ ಪ್ರಯೋಗಾಲಯ ದಾಖಲಿಸಿದ ದೂರಿನ ಆಧಾರದ ಮೇಲೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೋಗಿಗಳಿಗೆ ನರ್ಸಿಂಗ್ ಸಿಬ್ಬಂದಿ ಪೂರೈಸುತ್ತಿದ್ದ ಉದ್ಯಮಿಯೊಬ್ಬರು ಆಗಸ್ಟ್ 30 ರಂದು ತನ್ನಿಬ್ಬರು ಸಿಬ್ಬಂದಿಗಳ ಕೋವಿಡ್-19
ಪರೀಕ್ಷೆ ವರದಿ ನೀಡುವಂತೆ ಡಾಕ್ಟರ್ ಪರಶರ್ ಅವರನ್ನು ಕೇಳಿದ್ದಾರೆ.ನಕಲಿ ವರದಿಯನ್ನು ಪರಶರ್ ಉದ್ಯಮಿಗೆ ಕಳುಹಿಸಿದ್ದಾರೆ.
ನಂತರ ಆತ ತನ್ನ ಗ್ರಾಹಕರಿಗೆ ವರದಿ ಕಳುಹಿಸಿದ್ದಾರೆ.  

ಪರೀಕ್ಷಾ ವರದಿಯ ಹೆಸರಿನಲ್ಲಿ ತಪ್ಪೊಂದು ಕಂಡುಬಂದಿದ್ದು, ಆದನ್ನು ಸರಿಪಡಿಸಿ ಹೊಸ ವರದಿ ನೀಡುವಂತೆ ಗ್ರಾಹಕ ಡಯಾಗ್ನೊಸ್ಟಿಕ್ ಸೆಂಟರ್ ಸಂಪರ್ಕಿಸಿದ್ದಾಗ ಅದು ನಕಲಿ ವರದಿ ಎಂಬುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾನ್ಯತಾ ಪಡೆದ ಪ್ರಯೋಗಾಲಯಗಳ ಹೆಸರನ್ನು ಬಳಸಿ 75 ಕ್ಕೂ ಹೆಚ್ಚು ರೋಗಿಗಳಿಗೆ ನಕಲಿ ಕೋವಿಡ್-19 ಪರೀಕ್ಷಾ ವರದಿ ನೀಡಿರುವುದಾಗಿ ಪರಶರ್ ತಪ್ಪೊಪ್ಪಿಕೊಂಡಿದ್ದಾನೆ.

ಕಳೆದ ಎರಡೂವರೆ ತಿಂಗಳಿನಿಂದ ಕೋವಿಡ್-19 ನಕಲಿ ಪರೀಕ್ಷೆ ವರದಿ ನೀಡುವ ಕೆಲಸ ಮಾಡುತ್ತಿದ್ದು, ಪರೀಕ್ಷೆಗಾಗಿ 2400 ರೂ. ಪಡೆಯುತ್ತಿದ್ದು, ನೆಗೆಟಿವ್ ಅಥವಾ ಪಾಸಿಟಿವ್ ಎಂದು ಸೂಕ್ತ ರೀತಿಯಲ್ಲಿ ಕಂಡುಹಿಡಿಯದೇ ಕೇವಲ ರೋಗಿಯ ಲಕ್ಷಣ ನೋಡಿ ವರದಿ ನೀಡುತ್ತಿದ್ದಾಗಿ ಆತ ಹೇಳಿದ್ದು, ಮುಂದಿನ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಈ ಜಾಲದಲ್ಲಿ ಇರುವ ಇತರ ವ್ಯಕ್ತಿಗಳ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

SCROLL FOR NEXT