ದೇಶ

ಕೊಯಮತ್ತೂರಿನಲ್ಲಿ ಮೂರು ಹಂತದ ಕಟ್ಟಡ ಕುಸಿತ:ಓರ್ವ ಮಹಿಳೆ ಸಾವು, ಸಿಕ್ಕಿಹಾಕಿಕೊಂಡಿರುವ ಮೂವರು

Sumana Upadhyaya

ಕೊಯಮತ್ತೂರು: ಇಲ್ಲಿನ ಚೆಟ್ಟಿ ಸ್ಟ್ರೀಟ್ ಹತ್ತಿರ ಕೆಸಿ ತೊಟ್ಟಮ್ ಎಂಬಲ್ಲಿ ಮೂರು ಹಂತದ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಮೂವರು ಸಿಲುಕಿ ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ರಾತ್ರಿ 8.40ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ತೀವ್ರ ಮಳೆಯಿಂದಾಗಿ ಕಟ್ಟಡ ಕುಸಿಯಿತು ಎಂದು ಹೇಳಲಾಗುತ್ತಿದೆ. ಕೂಡಲೇ ಅಗ್ನಿಶಾಮಕ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 5 ವರ್ಷದ ಮಗುವನ್ನು ರಕ್ಷಿಸಿದ್ದಾರೆ.

ಅವಶೇಷಗಳಡಿಯಲ್ಲಿ ಸಿಲುಕಿರುವವರಿಗೆ ಆಮ್ಲಜನಕದ ಪೂರೈಕೆಗಾಗಿ ಕಟ್ಟಡದ ಹಿಂಭಾಗದಲ್ಲಿ ರಕ್ಷಣಾ ಸಿಬ್ಬಂದಿ ಮಣ್ಣನ್ನು ಕೊರೆದರು. ಮೃತಪಟ್ಟವರನ್ನು 27 ವರ್ಷದ ಶ್ವೇತಾ ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿರುವಾಗಲೇ ಆಕೆ ಮೃತಪಟ್ಟಿದ್ದರು. ಅವರ 65 ವರ್ಷದ ಅತ್ತೆ ಮತ್ತು 45 ವರ್ಷದ ಅತ್ತಿಗೆ ಕವಿತಾರನ್ನು ರಕ್ಷಿಸಲಾಗಿದೆ. ಎರಡು ಗಂಟೆ ಕಳೆದ ನಂತರ ಶ್ವೇತಾಳ 5 ವರ್ಷದ ಮಗನನ್ನು ರಕ್ಷಿಸಿದ್ದಾರೆ. ಎಲ್ಲರನ್ನೂ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ ರಾಜಮಣಿ. ನಗರ ಪೊಲೀಸ್ ಆಯುಕ್ತ ಸುಮಿತ್ ಶರಣ್, ಉಪ ಆಯುಕ್ತರಾದ ಜಿ ಸ್ಟಾಲಿನ್, ಇ ಎಸ್ ಉಮಾ ಆಗಮಿಸಿ ಪರಿಸ್ಥಿತಿ ನಿಗಾ ವಹಿಸುತ್ತಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಕೊಯಮತ್ತೂರಿಗೆ ಹತ್ತಿರದ ಮೆಟ್ಟುಪಾಲಯಂನ ನಡೂರ್ ಗ್ರಾಮದಲ್ಲಿ 20 ಅಡಿ ಎತ್ತರದ ಗೋಡೆ ಕುಸಿದು ನಾಲ್ಕು ಮನೆಗಳು ಕುಸಿದಿದ್ದರಿಂದ ಸುಮಾರು 17 ಮಂದಿ ಮೃತಪಟ್ಟಿದ್ದರು.

SCROLL FOR NEXT