ದೇಶ

ಗುಜರಾತ್ ನ ವಡೋದರದ ಸರ್ಕಾರಿ ಆಸ್ಪತ್ರೆಯ ಕೋವಿಡ್-19 ವಾರ್ಡ್ ನಲ್ಲಿ ಬೆಂಕಿ ಅವಘಡ:ರೋಗಿಗಳು ಸುರಕ್ಷಿತ

Sumana Upadhyaya

ವಡೋದರ: ಗುಜರಾತ್ ನ ವಡೋದರದ ಸರ್ ಸಯ್ಯಾಜಿರಾವ್ ಜನರಲ್ ಆಸ್ಪತ್ರೆಯ ಕೋವಿಡ್-19 ತುರ್ತು ನಿಗಾ ಘಟಕದಲ್ಲಿ ಅಗ್ನಿ ಅವಘಡ ಉಂಟಾಗಿದ್ದು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ.

ಗುಜರಾತ್ ನ ವಡೋದರದಲ್ಲಿರುವ ಎಸ್ ಎಸ್ ಜಿ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ವೆಂಟಿಲೇಟರ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ದುರಂತ ಸಂಭವಿಸಿದ್ದು, ಇಲ್ಲಿ ಸುಮಾರು 300 ಕೊರೋನಾ ಪಾಸಿಟಿವ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿನ 35 ರೋಗಿಗಳನ್ನು ಬೇರೆ ವಾರ್ಡ್ ಗೆ ವರ್ಗಾಯಿಸಲಾಗಿದ್ದು ನಂತರ ಬೆಂಕಿಯನ್ನು ನಂದಿಸಲಾಯಿತು ಎಂದು ಗುಜರಾತ್ ಆರೋಗ್ಯ ಸಚಿವ ನಿತಿನ್ ಪಟೇಲ್ ತಿಳಿಸಿದ್ದಾರೆ.

ಬೆಂಕಿ ಸ್ಫೋಟಗೊಂಡು ಹತ್ತಿ ಉರಿಯತೊಡಗಿದಾಗ ವಾರ್ಡ್ ನಲ್ಲಿ ಸುಮಾರು 15 ಮಂದಿ ರೋಗಿಗಳಿದ್ದರು. ಈ ರೋಗಿಗಳು ಮತ್ತು ಪಕ್ಕದ ವಾರ್ಡ್ ನ ಸುಮಾರು 20 ರೋಗಿಗಳನ್ನು ಸುರಕ್ಷಿತವಾಗಿ ಬೇರೆ ವಾರ್ಡ್ ಗೆ ವರ್ಗಾಯಿಸಲಾಯಿತು. ಇದೀಗ ಇಡೀ ಆಸ್ಪತ್ರೆ ಸಹಜ ಸ್ಥಿತಿಗೆ ಬಂದು ಕಾರ್ಯನಿರ್ವಹಿಸುತ್ತಿದೆ ಎಂದು ಆರೋಗ್ಯ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಯಾವೊಬ್ಬ ರೋಗಿಗೂ ಗಾಯಗಳಾಗಿಲ್ಲ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದರು.

SCROLL FOR NEXT