ದೇಶ

ಚೀನಾ ವಿಸ್ತರಣಾವಾದಕ್ಕೆ ಕಡಿವಾಣ ಹಾಕಲು ಕೈ ಜೋಡಿಸಿದ ಜಪಾನ್-ಭಾರತ

Srinivas Rao BV

ನವದೆಹಲಿ: ಚೀನಾ ವಿಸ್ತರಣಾವಾದಕ್ಕೆ ಕಡಿವಾಣ ಹಾಕಲು ಭಾರತ-ಜಪಾನ್ ಕೈ ಜೋಡಿಸಿದ್ದು ಮಿಲಿಟರಿ ಲಾಜಿಸ್ಟಿಕ್ಸ್ ಒಪ್ಪಂದಕ್ಕೆ ಸಹಿ ಹಾಕಿವೆ. 

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ-ಜಪಾನ್ ಪರಸ್ಪರ ಲಾಜಿಸ್ಟಿಕ್ಸ್ ಸಪೋರ್ಟ್ ಅರೇಂಜ್ಮೆಂಟ್ಸ್ (ಎಂಎಲ್ಎಸ್ಎ) ಗೆ ಸಹಿ ಹಾಕಿದ್ದು ಚೀನಾದ ವಿಸ್ತರಣಾವಾದದ ನಡೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. 

ಭಾರತದ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಹಾಗೂ ಜಪಾನ್ ನ ರಾಯಭಾರಿ ಸುಜೂಕಿ ಸತೋಶಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನಿಕಟವಾದ ಸಹಕಾರ, ಪರಸ್ಪರರ ಮಿಲಿಟರಿ ಸೌಲಭ್ಯಗಳ ಕಾರ್ಯಸಾಧ್ಯತೆ ಮತ್ತು ಬಳಕೆಗೆ ಸೂಕ್ತವಾದ ಚೌಕಟ್ಟು ನಿರ್ಮಿಸಲು ಈ ಒಪ್ಪಂದ ಸಹಕಾರಿಯಾಗಿದೆ. 

ದ್ವಿಪಕ್ಷೀಯ ತರಬೇತಿ ಚಟುವಟಿಕೆಗಳಿಗೆ ಅಗತ್ಯವಿರುವ ಸೇನೆಗಳನ್ನು ಒದಗಿಸುವುದಕ್ಕೂ ಸಹ ಈ ಒಪ್ಪಂದ ಸಹಕಾರಿಯಾಗಲಿದೆ. ಇದೇ ಮಾದರಿಯ ಒಪ್ಪಂದಗಳನ್ನು ಭಾರತ ಅಮೆರಿಕ, ಫ್ರಾನ್ಸ್, ದಕ್ಷಿಣ ಕೊರಿಯಾ, ಸಿಂಗಪೂರ್, ಆಸ್ಟ್ರೇಲಿಯಾದೊಂದಿಗೂ ಮಾಡಿಕೊಂಡಿದೆ.

ಅಮೆರಿಕಾದೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ  ಜಿಬೌಟಿ, ಡಿಯಾಗೋ ಗಾರ್ಸಿಯಾ, ಗುವಾಮ್ ಮತ್ತು ಸುಬಿಕ್ ಬೇ ಗಳಲ್ಲಿ ಅಮೆರಿಕಾದ ನೆಲೆಗಳಿಗೆ ಭಾರತ ಪ್ರವೇಶ ಸಾಧ್ಯವಾಗಿದೆ. 

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ನಡೆ ಆಯಕಟ್ಟಿನ ದೃಷ್ಟಿಯಿಂದ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾವನ್ನು ನಿಯಂತ್ರಣದಲ್ಲಿಡಲು ಭಾರತಕ್ಕೆ ಈ ರೀತಿಯ ಒಪ್ಪಂದಗಳ ಅಗತ್ಯತೆ ಇದೆ. 

SCROLL FOR NEXT