ದೇಶ

ಜಮ್ಮು-ಕಾಶ್ಮೀರ:ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ 

Sumana Upadhyaya

ಜಮ್ಮು: ಕಳೆದ ರಾತ್ರಿ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ 5 ವಲಯಗಳಲ್ಲಿ ಗಡಿ ನಿಯಂತ್ರಣ ರೇಖೆಯ ಫಾರ್ವರ್ಡ್ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಭಾರೀ ಗುಂಡಿನ ಮಳೆಗರೆದಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ಭಾರತೀಯ ಸೇನೆ ದಿಟ್ಟವಾಗಿ ಪ್ರತಿಕ್ರಿಯೆ ನೀಡಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಸೇನೆ ಗುಂಡು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಗಡಿ ನಿಯಂತ್ರಣ ರೇಖೆ ನಿಯಮ ಉಲ್ಲಂಘಿಸಿ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ ಎಂದು ಜಮ್ಮು ಮೂಲದ ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.

ನಿನ್ನೆ ಸಾಯಂಕಾಲ ಪಾಕಿಸ್ತಾನ ಸೇನೆ ಬಾಲಾಕೋಟ್ ವಲಯದ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ಮಾಡಲು ಸಂಚು ರೂಪಿಸಿತ್ತು. ಈ ವರದಿ ಬರುವವರೆಗೂ ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ತಿಳಿದುಬಂದಿದೆ. ಕಳೆದ ಸೆಪ್ಟೆಂಬರ್ 2ರಂದು ಪಾಕಿಸ್ತಾನ ಸೇನೆ ರಜೌರಿ ಜಿಲ್ಲೆಯ ಕೇರಿ ವಲಯದಲ್ಲಿ ಉಲ್ಲಂಘನೆ ಮಾಡಿ ಬಂದು ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಕಿರಿಯ ಅಧಿಕಾರಿ ಹುತಾತ್ಮರಾಗಿದ್ದರು. 

SCROLL FOR NEXT