ದೇಶ

ಕೋವಿಡ್-19ನಿಂದ ಗುಣಮುಖ ಹೊಂದಿದವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಶಿಷ್ಟಾಚಾರ-ನಿಯಮ ಬಿಡುಗಡೆ

Sumana Upadhyaya

ನವದೆಹಲಿ: ದೇಶದಲ್ಲಿ ದಿನಂಪ್ರತಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಕೊರೋನೋತ್ತರ ನಿರ್ವಹಣೆ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಕೊರೋನಾ ಪಾಸಿಟಿವ್ ಬಂದವರು ಗುಣಮುಖ ಹೊಂದಿದ ನಂತರ ಯಾವ ರೀತಿ ಜೀವನ ಪಾಲನೆ ಮಾಡಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ. ಅವುಗಳಲ್ಲಿ ಯೋಗಾಸನ, ಪ್ರಾಣಾಯಾಮ, ದಿನನಿತ್ಯ ನಡಿಗೆ ಮುಖ್ಯವಾದದ್ದು.

ಕೋವಿಡ್-19 ಸೋಂಕು ಗುಣಮುಖ ಹೊಂದಿದ ನಂತರ ರೋಗಿಗಳ ಅನುಸರಣಾ ಆರೈಕೆ ಮತ್ತು ಯೋಗಕ್ಷೇಮಕ್ಕಾಗಿ ಸಮಗ್ರ ವಿಧಾನವನ್ನು ಅನುಸರಿಸುವ ಅಗತ್ಯವಿದೆ ಎಂದು ಹೇಳಿದೆ. ಹಾಗಾದರೆ ಆರೋಗ್ಯ ಸಚಿವಾಲಯದ ಶಿಷ್ಟಾಚಾರಗಳೇನು ಎಂಬುದನ್ನು ನೋಡೋಣ.

1. ಕೋವಿಡ್-19 ಸೋಂಕು ನಿವಾರಣೆಯಾದ ನಂತರವೂ ಮಾಸ್ಕ್ ಬಳಕೆ ಕಡ್ಡಾಯ, ಕೈ, ಮುಖಗಳನ್ನು ಯಾವತ್ತೂ ಶುಚಿಯಾಗಿಟ್ಟುಕೊಳ್ಳಬೇಕು, ಸ್ಯಾನಿಟೈಸರ್ ಬಳಕೆ ಸಹ ತಪ್ಪದೆ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
2. ಬಿಸಿ ನೀರನ್ನು ನಿಯಮಿತವಾಗಿ ಸೇವಿಸುತ್ತಿರಬೇಕು.
3. ದೇಹದಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುವ ಆಯುಷ್ ಇಲಾಖೆಯ ಔಷಧಿಗಳನ್ನು ಸೇವಿಸಿ.
4. ದೇಹ ಉಲ್ಲಸಿತವಾಗಿದ್ದರೆ ಮನೆಗೆಲಸವನ್ನು ನೀವೇ ಮಾಡುತ್ತಿರಿ. ಹಂತ ಹಂತವಾಗಿ ವೃತ್ತಿಪರ ಕೆಲಸಗಳನ್ನು ಆರಂಭಿಸಿ.
5. ದಿನನಿತ್ಯ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡುತ್ತಿರಿ. ಆರೋಗ್ಯವನ್ನು ನೋಡಿಕೊಂಡು ವೈದ್ಯರು ಹೇಳಿದಂತೆ ಮಾಡುತ್ತಿರಿ.
6. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ, ಯೋಗ ಮಾಡುತ್ತಿರಿ.
7. ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ನಿಯಮಿತವಾಗಿ ನಡಿಗೆ ಮಾಡುತ್ತಿರಿ.
8. ಪೌಷ್ಟಿಕಯುಕ್ತ ಆಹಾರ ಸೇವಿಸುತ್ತಿರಿ
9. ಸರಿಯಾದ ಸಮಯಕ್ಕೆ ಸಾಕಷ್ಟು ನಿದ್ದೆ, ವಿಶ್ರಾಂತಿ ಬೇಕು.
10. ಕೊರೋನೋತ್ತರ ಅಧಿಕ ಜ್ವರ, ಉಸಿರಾಟ ಸಮಸ್ಯೆ, ಎದೆನೋವು ಬರುತ್ತಿರುತ್ತದೆಯೇ ಎಂದು ನೋಡಿಕೊಳ್ಳಿ.

ಸಮುದಾಯ ಹಂತಗಳು:
ಕೊರೋನಾದಿಂದ ಗುಣಮುಖ ಹೊಂದಿದ ವ್ಯಕ್ತಿಗಳು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಿ.

ಆರೋಗ್ಯಸೇವೆ ವ್ಯವಸ್ಥೆಗಳು:
1. ಕೊರೋನಾದಿಂದ ಗುಣಮುಖ ಹೊಂದಿದ ನಂತರ ಫಾಲೋ ಅಪ್ ಗೆ 7 ದಿನಗಳೊಳಗೆ ವೈದ್ಯರನ್ನು ಭೇಟಿ ಮಾಡಿ.
2. ಕೊರೋನಾ ಸಮಯದಲ್ಲಿ ಹೋಂ ಐಸೊಲೇಷನ್ ನಲ್ಲಿರುವವರು ಹೆಚ್ಚಿನ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣದ ಹತ್ತಿರದ ಆರೋಗ್ಯ ಕೇಂದ್ರವನ್ನು ಭೇಟಿ ಮಾಡಬೇಕು.

3. ತೀವ್ರ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರು ಕಠಿಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

SCROLL FOR NEXT