ದೇಶ

ಬಂಗಲೆ ಹಾನಿ: ಬಿಎಂಸಿಯಿಂದ 2 ಕೋಟಿ ರೂ. ಪರಿಹಾರ ಕೇಳಿದ ಕಂಗನಾ

Lingaraj Badiger

ಮುಂಬೈ: ತಮ್ಮ ಮುಂಬೈ ಬಂಗಲೆ ತೆರವು ಕಾರ್ಯಾಚರಣೆ "ಅಕ್ರಮ" ಎಂದಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರು, ಕಟ್ಟಡ ಹಾನಿಗೊಳಿಸಿದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) 2 ಕೋಟಿ ರೂ.ಪರಿಹಾರ ನೀಡಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಬಿಎಂಸಿ ಸೆಪ್ಟೆಂಬರ್ 9ರಂದು ಕಂಗನಾ ಅವರ ಮುಂಬೈನ ಬಾಂದ್ರಾದ ಪಾಲಿ ಹಿಲ್ ಬಂಗಲೆ ಅಕ್ರಮ ಕಟ್ಟಡ ಎಂದು ಗುರುತಿಸಿ, ಅದನ್ನು ನಾಶ ಮಾಡಿತ್ತು.

ಬಂಗಲೆಯ ಶೇ. 40ರಷ್ಟು ಭಾಗವನ್ನು ಬಿಎಂಸಿ ನಾಶ ಮಾಡಿದೆ. ಚಂಡೇಲಿಯರ್ಸ್, ಸೋಫಾ, ಅಪರೂಪದ ಆರ್ಟ್‌ಗಳನ್ನು ನಾಶಪಡಿಸಲಾಗಿದೆ ಎಂದು ನಟಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ನೋಟಿಸ್ ಕಳುಹಿಸಿ 24 ಗಂಟೆಯಲ್ಲೇ ತೆರವು ಕಾರ್ಯಾಚರಣೆ ಆರಂಭಿಸಿದ ಬಗ್ಗೆಯೂ ನಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ ಗುರುವಾರ ಕಂಗನಾ ವಕೀಲ ರಿಜ್ವಾನ್ ಸಿದ್ಧಿಕಿ, ಬಂಗಲೆ ತೆರವು ಕಾರ್ಯಾಚರಣೆ ಸಂಬಂಧ ತಾವು ಸಲ್ಲಿಸಿದ್ದ ಅರ್ಜಿಯನ್ನು ತಿದ್ದುಪಡಿ ಮಾಡುವುದಾಗಿ ಹೈಕೋರ್ಟ್‌ಗೆ ತಿಳಿಸಿದ್ದರು. ಅದರಂತೆ ಈಗ ತಿದ್ದುಪಡಿ ಮಾಡಿದ ಅರ್ಜಿ ಸಲ್ಲಿಸಿದ್ದು, ಬಿಎಂಸಿಯಿಂದ 2 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.

ಅರ್ಜಿ ತಿದ್ದುಪಡಿಗೆ ಸೆ.14 ರ ತನಕ ಹೈಕೋರ್ಟ್ ಸಮಯ ಕೊಟ್ಟಿದ್ದು, ಸೆ.22ಕ್ಕೆ ಅಂತಿಮ ವಿಚಾರಣೆ ನಡೆಯಲಿದೆ.

SCROLL FOR NEXT