ದೇಶ

ಫೆಲುಡಾ, ದೇಶದ ಮೊದಲ ಜೀನ್ ಆಧಾರಿತ ಕೋವಿಡ್-19 ಟೆಸ್ಟಿಂಗ್ ಗೆ ಅನುಮೋದನೆ: ಭಾರತ ವಿಶ್ವಕ್ಕೆ ಮಾದರಿ! 

Srinivas Rao BV

ನವದೆಹಲಿ: ಭಾರತ ಹೆಮ್ಮೆ ಪಡುವಂತಹ, ವಿಶ್ವಕ್ಕೇ ಮಾದರಿಯಾಗುವ, ದೇಶಿಯವಾಗಿ ತಯಾರಿಸಲಾಗಿರುವ "ಫೆಲುಡಾ" ಕೊರೋನಾ-19 ಟೆಸ್ಟಿಂಗ್ ವಿಧಾನಕ್ಕೆ ಭಾರತದ ಔಷಧ ನಿಯಂತ್ರಕ ಅನುಮೋದನೆ ನೀಡಿದೆ. 

ಕೋವಿಡ್-19 ಗೆ ಕಾರಣವಾಗುವ SARS Cov-2 ವೈರಾಣುವನ್ನು ಪತ್ತೆ ಮಾಡುವುದಕ್ಕೆ ಈ ಪರೀಕ್ಷಾ ವಿಧಾನದಲ್ಲಿ ಸಿಆರ್ ಐಎಸ್ ಪಿ ಆರ್ (CRISPR)  ಜೀನ್-ಎಡಿಟಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಟೆಸ್ಟಿಂಗ್ ವಿಧಾನವನ್ನು ವಾಣಿಜ್ಯವಾಗಿ ಬಳಕೆ ಮಾಡುವುದಕ್ಕೆ ಔಷಧ ನಿಯಂತ್ರಕ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದೆ. 

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಯ ಮಂಡಳಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ದೆಹಲಿ ಹಾಗೂ ಟಾಟಾ ಗ್ರೂಪ್ ನ ಫಲವಾಗಿ ಈ ಅದ್ಭುತ ಸಾಧನೆ ಹೊರಬಂದಿದ್ದು ಈ ವಿಧಾನಕ್ಕೆ ಫೆಲುಡಾ ಎಂದು ನಾಮಕರಣ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

"ಟಾಟಾ ಸಿಆರ್ ಐಎಸ್ ಪಿಆರ್ ಟೆಸ್ಟ್, ಕೋವಿಡ್-19 ನ್ನು ಪರೀಕ್ಷೆ ಮಾಡಲು ವಿಶೇಷವಾಗಿ ಅಳವಡಿಕೆ ಮಾಡಿಕೊಳ್ಳಲಾಗಿರುವ ಸಿಎಎಸ್9 ಪ್ರೊಟೀನ್ ನ್ನು ನಿಯೋಜನೆ ಮಾಡುತ್ತಿರುವ ವಿಶ್ವದ ಮೊದಲ ಡಯಾಗ್ನೋಸ್ಟಿಕ್ ಪರೀಕ್ಷೆ ಇದಾಗಿಗಿರುವುದಾಗಿ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದಾಗ ದೇವಜ್ಯೋತಿ ಚಕ್ರವರ್ತಿ ಹಾಗೂ ಸೌವಿಕ್ ಮೈತಿ ನೇತೃತ್ವದ ಐಜಿಐಬಿ ತಂಡ ಜೀನೋಮ್ ಆಧಾರಿತ ರೋಗ ಪತ್ತೆ ಟೂಲ್ ಗಾಗಿ ಕೆಲಸ ಮಾಡುತ್ತಿತ್ತು. 100 ದಿನಗಳಲ್ಲಿ ತಮ್ಮ ಪ್ರಯತ್ನದಲ್ಲಿ ಈ ತಂಡ ಯಶಸ್ವಿಯಾಗಿದ್ದು ಅದರ ಫಲಿತವೇ ಫೆಲುಡಾ ಎಂದು ಐಜಿಐಬಿ ನಿರ್ದೇಶಕ ಡಾಾನುರಾಗ್ ಅವರ್ಗಾಲ್ ತಿಳಿಸಿದ್ದಾರೆ. 

ಫೆಲುಡಾ ಮೂಲಕ ಅತ್ಯಂತ ನಿಖರವಾಗಿ ಕೋವಿಡ್-19 ಪರೀಕ್ಷೆಯನ್ನು ಮಾಡಬಹುದಾಗಿದ್ದು ಕೇವಲ 2 ಗಂಟೆಗಳಲ್ಲಿ ಫಲಿತಾಂಶವೂ ದೊರೆಯಲಿದೆ. 

  • ಈಗಾಗಲೇ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ, ಆದರೆ ಫೆಲುಡಾ ವಿಶೇಷತೆಗಳೇನು?
  • ಅತ್ಯಂತ ಕಡಿಮೆ ಬೆಲೆ ಈಗಿನ ಅಂದಾಜಿನ ಪ್ರಕಾರ 600 ರೂಪಾಯಿಗಳಿಗೆ ಪರೀಕ್ಷೆ ಮುಕ್ತಾಯಗೊಳ್ಳಲಿದೆ. 
  • ಗರ್ಭಧಾರಣೆಯನ್ನು ತ್ವರಿತವಾಗಿ ದೃಢಪಡಿಸುವ ಟೆಸ್ಟ್ ಮಾದರಿಯಲ್ಲಿ ಈ ಫೆಲುಡಾ ಕಾರ್ಯನಿರ್ವಹಿಸಲಿದೆ. ಅರ್ಥಾತ್ ಕಾಗದದ ಪಟ್ಟಿ ಬಣ್ಣ ಬದಲಾಯಿಸುವ ಮೂಲಕ ಕೊರೋನಾ ವೈರಸ್ ಇದೆಯೇ ಇಲ್ಲವೇ ಎಂಬುದನ್ನು ದೃಢೀಕರಿಸುತ್ತದೆ. 
  • ಮುಂದಿನ ದಿನಗಳಲ್ಲಿ ಇದನ್ನು ಬೇರೆ ರೋಗಕಾರಕಗಳನ್ನು ಪತ್ತೆ ಮಾಡುವುದಕ್ಕೂ ಸಹ ಪುನರ್ವಿನ್ಯಾಸಗೊಳಿಸಬಹುದಾಗಿದೆ. 
  • ಫೆಲುಡಾವನ್ನು ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿಸಲು ಸಿಎಸ್ಐಆರ್-ಐಜಿಐಬಿ ಹಾಗೂ ಐಸಿಎಂಆರ್ ನೊಂದಿಗೆ ಟಾಟಾ ಗ್ರೂಪ್ ಸಹಕರಿಸಿದೆ. 
  • ಜಾಗತಿಕ ಆರೋಗ್ಯ ಸೇವೆ ಹಾಗೂ ವಿಜ್ಞಾನ ಸಂಶೋಧನಾ ಜಗತ್ತಿಗೆ ಭಾರತ ಕೊಡುಗೆ ನೀಡಬಲ್ಲಂತಹ 
  • ಅತ್ಯದ್ಭುತ ಸಂಶೋಧನಾ ಮತ್ತು ಅಭಿವೃದ್ಧಿಯ ಪ್ರತಿಭೆಗಳು ದೇಶದಲ್ಲಿರುವುದನ್ನು ಫೆಲುಡಾ ಪ್ರತಿಬಿಂಬಿಸುತ್ತಿದೆ. 
SCROLL FOR NEXT