ದೇಶ

ರಾಮಜನ್ಮಭೂಮಿ ಹೋರಾಟದ ಬಗ್ಗೆ ಇದ್ದ ನನ್ನ ಮತ್ತು ಬಿಜೆಪಿಯ ನಂಬಿಕೆ, ಬದ್ಧತೆಗೆ ಸಿಕ್ಕಿದ ಜಯ: ಎಲ್.ಕೆ. ಅಡ್ವಾಣಿ

Sumana Upadhyaya

ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬಿಜೆಪಿಯ ರಾಜಕೀಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿಯವರ ಪಾಲಿಗೆ ಅತ್ಯಂತ ಪ್ರಮುಖವಾಗಿತ್ತು. ಈ ಇಳಿವಯಸ್ಸಿನಲ್ಲಿ ಇಂದು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಅವರ ಪಾಲಿಗೆ ಐತಿಹಾಸಿಕ ಜಯವಾಗಿದೆ.

ಕೋರ್ಟ್ ತೀರ್ಪು ಹೊರಬಂದು ಜಯ ಸಿಗುತ್ತಿದ್ದಂತೆ ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಸಿಹಿತಿಂಡಿ ಹಂಚಿ ಸಂಭ್ರಮಪಟ್ಟರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಲ್ ಕೆ ಅಡ್ವಾಣಿ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ರಾಮಜನ್ಮಭೂಮಿ ಹೋರಾಟದಲ್ಲಿ ನಾನು ವೈಯಕ್ತಿಕವಾಗಿ ಮತ್ತು ಬಿಜೆಪಿ ಇಟ್ಟಿರುವ ನಂಬಿಕೆ ಮತ್ತು ಬದ್ಧತೆಗೆ ಸಂದ ಜಯವಾಗಿದೆ ಎಂದು ಹೇಳಿದರು.

ಇನ್ನೊಂದೆಡೆ ಪ್ರತಿಕ್ರಿಯೆ ನೀಡಿದ ಮತ್ತೊಬ್ಬ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ, ಇದು ನ್ಯಾಯಾಲಯದ ಐತಿಹಾಸಿಕ ತೀರ್ಪು. ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ನಡೆದ ಘಟನೆಗೆ ಯಾವುದೇ ಪಿತೂರಿ ನಡೆಸಿರಲಿಲ್ಲ ಎಂಬುದನ್ನು ಈ ತೀರ್ಪು ಸಾಬೀತುಪಡಿಸಿದೆ. ನಮ್ಮ ಕಾರ್ಯಕ್ರಮ, ರ್ಯಾಲಿ ಯಾವುದೇ ಪಿತೂರಿಯ ಭಾಗವಾಗಿರಲಿಲ್ಲ. ಇಂದು ನ್ಯಾಯಾಲಯದ ತೀರ್ಪು ನಮಗೆ ಖುಷಿ ಕೊಟ್ಟಿದೆ. ರಾಮ ಮಂದಿರ ನಿರ್ಮಾಣದತ್ತ ನಮ್ಮ ಸಂಪೂರ್ಣ ಗಮನವನ್ನು ಇನ್ನು ಹರಿಸೋಣ ಎಂದು ಹೇಳಿದ್ದಾರೆ.

SCROLL FOR NEXT