ದೇಶ

5 ಲಕ್ಷ ಡೋಸ್ ಕೊರೋನಾ ಲಸಿಕೆ ವ್ಯರ್ಥ: ಕೇಂದ್ರದ ವಾದ ನಿರಾಕರಿಸಿದ ಮಹಾರಾಷ್ಟ್ರ ಸರ್ಕಾರ

Manjula VN

ಮುಂಬೈ: ಮಹಾರಾಷ್ಟ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಕೊರೊನಾ ಲಸಿಕೆ ವ್ಯರ್ಥವಾಗಿದೆ ಎಂಬ ಕೇಂದ್ರ ಸರ್ಕಾರದ ವಾದವನ್ನು ಆರೋಗ್ಯ ಸಚಿವ ರಾಜೇಶ್ ಟೋಪೆ ನಿರಾಕರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಜೇಶ್ ಟೋಪೆ ಅವರು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ನೀಡಿದ ಅಂಕಿ– ಅಂಶಗಳು ಸಮರ್ಪಕವಾಗಿಲ್ಲ ಎಂದು ಹೇಳಿದ್ದಾರೆ. 

ಕೇಂದ್ರ ಸಚಿವರು ದೇಶದಾದ್ಯಂತ ವ್ಯರ್ಥವಾಗಿರುವ ಲಸಿಕೆಯ ಶೇಕಡಾವಾರು ಪ್ರಮಾಣವನ್ನು ಉಲ್ಲೇಖಿಸಿದ್ದಾರೆ. ಆದರೆ, ರಾಜ್ಯದಲ್ಲಿ ವ್ಯರ್ಥವಾಗಿರುವ ಲಸಿಕೆಯ ಪ್ರಮಾಣ, ಅದಕ್ಕಿಂತ ಅರ್ಧದಷ್ಟು ಕಡಿಮೆ ಇದೆ ಎಂದು ತಿಳಿಸಿದ್ದಾರೆ. 

ಲಸಿಕೆ ಕೊರತೆಯಿಂದಾಗಿ ರಾಜ್ಯದ ಅನೇಕ ಲಸಿಕಾ ಕೇಂದ್ರಗಳನ್ನು ಬಂದ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈಗ 14 ಲಕ್ಷ ಡೋಸ್ ಲಸಿಕೆ ಮಾತ್ರ ಲಭ್ಯವಿದೆ, ಇದು ಕೇವಲ ಮೂರು ದಿನಗಳವರೆಗೆ ಆಗುತ್ತದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದರು.

ಈ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಜವಡೇಕರ್ ಅವರು, ಲಸಿಕೆ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ರಾಜಕೀಯ ಮಾಡಬಾರದು. ಮಹಾರಾಷ್ಟ್ರ ರಾಜ್ಯಕ್ಕೆ ಇಲ್ಲಿವರೆಗೆ ಲಸಿಕೆಯ 1,06,19,190 ಡೋಸೇಜ್‌ಗಳನ್ನು ಪೂರೈಸಲಾಗಿದೆ. 90,53,523 ಲಸಿಕೆಯ ಡೋಸೇಜ್‌ ಬಳಕೆಯಾಗಿದೆ. 7,43,280 ಡೋಸೇಜ್‌ಗಳಷ್ಟು ಲಸಿಕೆ ಕೊಡುವುದು ಬಾಕಿ ಇದೆ. 23 ಲಕ್ಷ ಡೋಸೇಜ್‌ಗಳಷ್ಟು ಲಸಿಕೆ ಲಭ್ಯವಿದೆ. ಮಹಾರಾಷ್ಟ್ರದಲ್ಲಿ 5 ಲಕ್ಷ ಡೋಸ್ ಕೊರೊನಾವೈರಸ್ ಲಸಿಕೆ ವ್ಯರ್ಥವಾಗಿದೆ. ಸರಿಯಾದ ರೀತಿಯಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿಕೊಳ್ಳದಿರುವುದೇ ಮುಖ್ಯ ಕಾರಣ ಎಂದು ಹೇಳಿದ್ದರು. 

SCROLL FOR NEXT